ಹಶೀಶ್ ಆಯಿಲ್‌ ಮಾರಾಟ ಜಾಲ ಬಯಲಿಗೆ: ಕೇರಳ ಮೂಲದ ಮೂವರ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಹಶೀಶ್ ಆಯಿಲ್ (ಗಾಂಜಾದಿಂದ ತಯಾರಿಸಲಾದ ಅಂಟು ಮಾದರಿಯ ಮಾದಕ ವಸ್ತು) ಮಾರಾಟ ಜಾಲ ಬಯಲಿಗೆಳೆಯುವಲ್ಲಿ ಭಾಗಮಂಡಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಬಳಿ ಇದ್ದ 10 ಲಕ್ಷ ರೂ. ಮೌಲ್ಯದ 1 ಕೆ.ಜಿ 160 ಗ್ರಾಂ ಹಶೀಶ್ ಆಯಿಲ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ರಾಜ್ಯದ ಕಾಸರಗೋಡುವಿನ ಅಹಮದ್ ಕಬೀರ್(37), ಕಾಂಞಂಗಾಡ್ ಮೂಲದ ಅಬ್ದುಲ್ ಖಾದರ್(27) ಹಾಗೂ ಮಹಮದ್ ಮುಜಮಿಲ್(27) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ಹಿನ್ನೆಲೆ: ಆ.29ರಂದು ಕೇರಳ ಕಡೆಯಿಂದ ಕರಿಕೆ ಮಾರ್ಗವಾಗಿ ತಾವೂರು ಕಡೆಗೆ ತೆರಳುವ ಸಲುವಾಗಿ ಕೆಎಲ್.33-ಎಫ್6825 ಸಂಖ್ಯೆಯ ಮಾರುತಿ ಸುಜುಕಿ ಸೆಲೆರಿಯೋ ಕಾರು ಆಗಮಿಸಿದೆ. ಈ ಸಂದರ್ಭ ಕಾರಿನಲ್ಲಿದ್ದ ವ್ಯಕ್ತಿಗಳು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಭಾಗಮಂಡಲ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಅತ್ತ ಕಡೆ ತೆರಳಿದ ಪೊಲೀಸರು ಕಾರಿನಲ್ಲಿದ್ದವರನ್ನು ವಿಚಾರಿಸಿ ಕಾರಿನ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನ ಡಿಕ್ಕಿಯಲ್ಲಿ ಕೆಎ.19-ಎಂ.ಹೆಚ್.2310 ಸಂಖ್ಯೆಯ 2 ನಂಬರ್ ಪ್ಲೇಟ್‍ಗಳು ಪತ್ತೆಯಾಗಿದೆ. ಮಾತ್ರವಲ್ಲದೆ ಪ್ಲಾಸ್ಟಿಕ್ ಡಬ್ಬದ ಒಳಭಾಗ ಕಪ್ಪು ಬಣ್ಣದ ಅಂಟು ಮಾದರಿಯ ವಸ್ತು ಕಂಡು ಬಂದಿದೆ.
ಈ ಬಗ್ಗೆ ಕಾರಿನ ಚಾಲಕನನ್ನು ವಿಚಾರಿಸಿದ ಸಂದರ್ಭ ಹಶೀಶ್ ಎಂಬ ಮಾದಕ ವಸ್ತುವಾಗಿದ್ದು, ಗಿರಾಕಿಗಳಿಗೆ ಮಾರಾಟ ಮಾಡುವ ಸಲುವಾಗಿ ಗೆಳೆಯರ ಜೊತೆ ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಈ ಸಂದರ್ಭ ಸ್ಥಳದಲ್ಲೇ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಡಿಪಾರು ಆರೋಪಿ: ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಅಹಮದ್ ಕಬೀರ್ ವಿರುದ್ಧ ಈ ಹಿಂದೆಯೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದೆ. ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು, ದರೋಡೆ ಹಾಗೂ ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಈತನನ್ನು ಬೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಗಡಿಪಾರು ಮಾಡಲಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡ ಆರೋಪಿಯಾಗಿದ್ದ ಎಂದು ಎಸ್.ಪಿ. ಅಯ್ಯಪ್ಪ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ನಿರ್ದೇಶನದಂತೆ ಮಡಿಕೇರಿ ಗ್ರಾಮಾಂತರ ಠಾಣೆ ಲಕ್ಷ‌ರ ಅನೂಪ್ ಮಾದಪ್ಪ, ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಪ್ರಿಯಾಂಕ, ಎಎಸ್‍ಐ ಬೆಳ್ಳಿಯಪ್ಪ, ಸಿಬ್ಬಂದಿಗಳಾದ ಇಬ್ರಾಹಿಂ, ಬಿ.ಸಿ. ಮಹೇಶ್, ಯಲ್ಲಾಲಿಂಗ ಶೇಗುಣನಿ, ಮಹದೇವಸ್ವಾಮಿ, ಪುನೀತ್ ಕುಮಾರ್, ಸುರೇಶ್ ಕುಮಾರ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!