ಹಾಸನ ಮಿಕ್ಸಿ ಸ್ಪೋಟ ಪ್ರಕರಣ: ಮೈಸೂರಿನಿಂದ ಶೀಘ್ರ ಎಫ್ಎಸ್ಎಲ್ ತಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಸನದ ಕೆ.ಆರ್. ಪುರಂನಲ್ಲಿ ಕಳೆದ‌ರಾತ್ರಿ ನಡೆದ ಮಿಕ್ಸಿ ಸ್ಪೋಟ ಘಟನೆಗೆ ಸಂಬಂಧಿಸಿ ಪೊಲೀಸ್ ತನಿಖೆ ಇನ್ನಷ್ಟು ತೀವ್ರಗೊಂಡಿದೆ. ಈ ಬಗ್ಗೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಘಟನೆಯ ಬಗ್ಗೆ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿದ ಹಾಸನ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಮ್, ಮಿಕ್ಸಿ ಟೆಸ್ಟ್‌ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವರು ಟೆಸ್ಟ್‌ ಮಾಡುವ ಮುನ್ನವೇ ಸ್ಫೋಟಗೊಂಡಿದೆ ಎನ್ನುತ್ತಿದ್ದಾರೆ. ಆದರೆ, ಘಟನೆಯಿಂದ ಅಂಗಡಿ ಮಾಲೀಕ ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಮಿಕ್ಸಿ ಬ್ಲಾಸ್ಟ್‌ಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಾಗಾಗಿಯೇ ಮೈಸೂರಿನಿಂದ ಎಫ್.ಎಸ್.ಎಲ್ ತಂಡಕ್ಕೆ ಮಾಹಿತಿ ನೀಡಿದ್ದು ಅವರು ಬಂದು ಪರಿಶೀಲನೆ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಲಿದೆ.  ಅಲ್ಲಿವರೆಗೂ ಯಾವುದೇ ಊಹಾಪೋಹ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದಿದ್ದಾರೆ.

ಹಾಸನದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ‌ ಕೊರಿಯರ್ ಶಾಪ್​ನಲ್ಲಿ ಕಳೆದ ರಾತ್ರಿ 7.30ಕ್ಕೆ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಶಾಪ್‌ ಮಾಲೀಕ ಶಶಿ ಗಂಭೀರ ಗಾಯಗೊಂಡಿದ್ದರಲ್ಲೇ, , ಕೊರಿಯರ್‌ ಅಂಗಡಿ ಗಾಜು ಪುಡಿಪುಡಿಯಾಗಿದ್ದವು.
ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್‌ಗೆ ಮಿಕ್ಸಿ ಪಾರ್ಸಲ್‌ ಬಂದಿತ್ತು. ಹೆಸರಿಗೆ ಬಂದಿದ್ದ ವ್ಯಕ್ತಿಗೆ ಮಿಕ್ಸಿ ಡೆಲಿವರಿ ಮಾಡಲಾಗಿತ್ತಂತೆ. ಆದರೆ, ಮಿಕ್ಸಿ ತೆಗೆದುಕೊಂಡು ಹೋದ ವ್ಯಕ್ತಿ ವಾಪಸ್‌ ಬಂದು ಈ ಮಿಕ್ಸಿ ತಮಗೆ ಬೇಡವೆಂದು ರಿಟರ್ನ್‌ ಮಾಡಿದ್ದಾರೆ. ಏನಾದರೂ ಲೋಪವಿದೆಯೇ ಎಂದು ಪರೀಕ್ಷಿಸುವ ವೇಳೆ ಮಿಕ್ಸಿ ಬ್ಲಾಸ್ಟ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!