ಹೊಸದಿಗಂತ ವರದಿ ಹಾಸನ :
ಇಸ್ರೇಲ್ ನಲ್ಲಿ ನೆಲೆಸಿರುವ ಹಾಸನ ಜಿಲ್ಲೆಯ ನಾಗರೀಕರ ರಕ್ಷಣೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಿ ಎಂದು ವಿಪತ್ತು ನಿರ್ವಾಹಣಾ ಪ್ರಾಧಿಕಾರ ತಿಳಿಸಿದೆ.
ಇಸ್ರೇಲ್‌ನಲ್ಲಿ ವಿವಿಧೆಡೆ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಸಕಲೇಶಪುರ ತಾಲೂಕು ಅಂಕಿಹಳ್ಳಿ ಗ್ರಾಮದ ಆಂತೋಣಿ, ಸಕಲೇಶಪುರ ಪಟ್ಟಣದ ನವೀನ್, ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ರೀಮಾ ಪಿಂಟೋ, ಜಾನ್‌ಪಿಂಟೋ, ವಿನಿತಾ ಪ್ರಿಯಾ ಪಿಂಟೋ, ರೋಷನ್ ಪಿಂಟೋ ಇಸ್ರೇಲ್‌ನಲ್ಲಿ ಉದ್ಯೋಗ ಹರಸಿ ನೆಲೆಸಿದ್ದಾರೆ. ಕೆಲವರು ನರ್ಸಿಂಗ್ ಹಾಗೂ ವಿವಿಧ ಉದ್ಯೋಗ ಮಾಡುತ್ತಾ ಆಶ್ರಯ ಪಡೆದಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಡಿಂಕ ಗ್ರಾಮದ ಕೃಷ್ಣ ಗೌಡ ಎಂಬುವವರು ಕಳೆದ 20 ವರ್ಷಗಳಿಂದ ನೆಲೆಸಿದ್ದಾರೆ.
ಉಗ್ರರ ದಾಳಿಯಿಂದ ಈಗಾಗಲೇ ಸಾವಿರಾರು ಅಮಾಯಕರು ಮೃತಪಟ್ಟಿರುವುದರಿಂದ ಅಲ್ಲಿರುವ ಸುಮಾರು 20 ಕ್ಕೂ ಹೆಚ್ಚು ಮಂದಿ ಕನ್ನಡಿಗರ ಬಗ್ಗೆ ಇಲ್ಲಿರುವ ಪೋಷಕರು, ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ. ಹಾಸನ ಜಿಲ್ಲೆಯ ನಾಗರೀಕರ ರಕ್ಷಣೆಗಾಗಿ ಜಿಲ್ಲಾಡಳಿತವು ಈಗಾಗಲೇ ಸಹಾಯವಾಣಿಯನ್ನು ತೆರೆದಿದೆ. ಇಸ್ರೇಲ್ ದೇಶಕ್ಕೆ ಪ್ರವಾಸಕ್ಕಾಗಿ / ಕೆಲಸ/ ವಿದ್ಯಾಭ್ಯಾಸಕ್ಕಾಗಿ ತೆರಳಿ ಸದ್ಯ ಸಂಕಷ್ಟದಲ್ಲಿರುವ ನಾಗರೀಕರ (ಹೆಸರು, ಉದ್ಯೋಗ, ಮೊಬೈಲ್ ನಂಬರ್, ಕಂಪೆನಿಯ ಹೆಸರು, ಕಾಲೇಜ್/ ಯುನಿವರ್ಸಿಟಿಯ ಹೆಸರು ಇನ್ನಿತರೆ) ಮಾಹಿತಿಯನ್ನು ಜಿಲ್ಲಾಡಳಿತದೊಂದಿಗೆ ಹಂಚಿಕೊಂಡರೆ ಅಂತಹವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲು ಹಾಗೂ ತಕ್ಷಣದ ನೆರವಿಗೆ ಸ್ಪಂದಿಸಲಿದೆ.
ಅಗತ್ಯವಿದ್ದಲ್ಲಿ ಕೂಡಲೇ ದೂರವಾಣಿ ಸಂಖ್ಯೆ 1077 / 08172-261111 ಕರೆಮಾಡಿ ಅಗತ್ಯ ನೆರವು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.