ಸಿದ್ಧರಾಮಯ್ಯ ʻಜಾತ್ಯಾತೀತʼ ಹೇಳಿಕೆಗೆ ಹೆಚ್‌ಡಿಕೆ ಗರಂ: ‘ಸಿದ್ದಸುಳ್ಳು’ಗಳಿಗೆ ಕೊರತೆಯಿಲ್ಲ ಎಂದು ಟ್ವೀಟ್‌ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್‌ ಜಾತ್ಯಾತೀತವಾಗಿ ಉಳಿದಿದೆಯೇ? ಎಂಬ ಸಿಎಂ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಟ್ವೀಟ್‌ ಮೂಲಕ ಹರಿಹಾಯ್ದಿದ್ದಾರೆ.

ಸರಣಿ ಟ್ವೀಟ್‌ ಮೂಲಕ ಉತ್ತರ ಕೊಟ್ಟಿರುವ ಹೆಚ್‌ಡಿಕೆ..ʻಅವರ ಬೆನ್ನು ಅವರಿಗೆ ಕಾಣುವುದಿಲ್ಲ. ನಾಲಿಗೆಗೂ ಮೂಳೆ ಇರುವುದಿಲ್ಲ. ಸಿಎಂ ಸೀಟಿನಲ್ಲಿ ಕೂತರೂ ‘ಸಿದ್ದಸುಳ್ಳು’ಗಳಿಗೆ ಕೊರತೆಯೇನೂ ಇಲ್ಲ. ‘ ಜಾತ್ಯತೀತ’ ಎನ್ನುವ ಟ್ಯಾಗ್ ಲೈನ್ ಇಟ್ಟುಕೊಂಡು ಜಾತಿ ಸಭೆಗಳನ್ನು ಮಾಡಿ ಕುಕ್ಕರ್, ಇಸ್ತ್ರೀ ಪೆಟ್ಟಿಗೆ ಹಂಚುವುದು ಜಾತ್ಯತೀತವೇ? ಅಹಿಂದ ಎಂದು ಹೇಳಿಕೊಂಡು ಧರ್ಮಕ್ಕೊಂದು ಸಮಾವೇಶ, ಜಾತಿಗೊಂದು ಸಭೆ ನಡೆಸುವುದು ಜಾತ್ಯತೀತವೇ? ಸ್ವಲ್ಪ ಹೇಳುವಿರಾ ಸಿದ್ದರಾಮಯ್ಯನವರೇ?ʼ ಎಂದು ಪ್ರಶ್ನಿಸಿದ್ದಾರೆ.

ಕೋಮುವಾದಿ ಎಂದು ಬಿಜೆಪಿಯನ್ನು ಹೀಗಳೆಯುತ್ತಾ ಆ ಪದದಿಂದಲೇ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಡೋಂಗಿ ಸಮಾಜವಾದಿ ನೀವು. ನಿಮ್ಮ ಅಡ್ಜಸ್ಟ್’ಮೆಂಟ್ ರಾಜಕಾರಣ ಜಗತ್ಪ್ರಸಿದ್ಧಿ. I.N.D.I.A ಎಂಬ ಮೈತ್ರಿಕೂಟದಲ್ಲಿ ಅದೇ ಬಿಜೆಪಿಯ ʻಬಿʼ ಟೀಂಗಳನ್ನು ಇಟ್ಟುಕೊಂಡು, ಅವುಗಳ ಬಾಲಂಗೋಚಿ ಆಗಿರುವ ಕಾಂಗ್ರೆಸ್‌ ಪಕ್ಷ ಜಾತ್ಯತೀತವೇ? ಉತ್ತರಿಸಿ ಮುಖ್ಯಮಂತ್ರಿಗಳೇ?

ಸ್ಟಾಲಿನ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಹೇಮಂತ್ ಸೊರೇನ್, ವೈಕೋ, ಮೆಹಬೂಬಾ ಮುಫ್ತಿ, ಅಖೈರಿಗೆ ಶಿವಸೇನೆಯ ಉದ್ಧವ್ ಠಾಕ್ರೆ.. ಇವರೆಲ್ಲರೂ ಬಿಜೆಪಿ ಪಡಸಾಲೆಯಲ್ಲಿ ಪೊಗದಸ್ತಾಗಿ ಅಧಿಕಾರದ ಭೋಜನ ಉಂಡವರಲ್ಲವೇ? ಅವರ ಪಕ್ಕ ಕುರ್ಚಿ ಹಾಕಿಕೊಂಡು ಕೂರಲು ನಿಮಗೆ ನಾಚಿಕೆ ಆಗುವುದಿಲ್ಲವೇ?

2006ರಲ್ಲಿ ಬಿಜೆಪಿ ಜತೆ ಸರಕಾರ ರಚಿಸಿದ ಏಕೈಕ ಕಾರಣಕ್ಕೆ ಬಿಜೆಪಿ ಬಿ ಟೀಂ ಎಂದು ಜನತಾದಳಕ್ಕೆ ಮುದ್ರೆ ಹಾಕಿದಿರಿ. 2018ರಲ್ಲಿ ಅದೇ ಬಿ ಟೀಂ ಜತೆ ಸರಕಾರ ರಚಿಸಲು ಮಾನ್ಯ ದೇವೇಗೌಡರ ಮನೆಗೆ ಬಂದು ಸಾಲಾಗಿ ಕೈಕಟ್ಟಿ ನಿಂತುಕೊಂಡಿರಿ!! ಮರೆತಿರಾ ಛದ್ಮವೇಷಧಾರಿ?? ಪಾಪ.. ನಿಮಗೆ ಕೋಮುವಾದ, ಜಾತ್ಯತೀತ ಸಿದ್ಧಾಂತದ ಕನಸು ಈಗ ಬಿದ್ದಿದೆ. ನಿಮ್ಮ ರಾಜಕೀಯ ಬದುಕಿಗಾಗಿ ಜಾತಿಜಾತಿಗಳನ್ನು ಒಡೆದು ಬೆಂಕಿ ಇಟ್ಟು ಆ ಕೆನ್ನಾಲಗೆಯಲ್ಲೇ ಚಳಿ ಕಾಯಿಸಿಕೊಳ್ಳುವುದಷ್ಟೇ ನಿಮಗೆ ಗೊತ್ತು.

ಜಾತ್ಯತೀತ ಎನ್ನುವುದು ನಾಲಿಗೆ ಮೇಲಿನ ಮಾತಲ್ಲ, ಹೃದಯದ ಆಳದಲ್ಲಿರುವ ನಿಷ್ಠೆ. ಸ್ವಾರ್ಥ ರಾಜಕಾರಣವನ್ನೇ ಹಾಸಿಹೊದ್ದು, ಅಧಿಕಾರ ದಾಹವೇ ಹಾಸುಹೊಕ್ಕಾಗಿರುವ ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ. ಜಾತ್ಯತೀತತೆ ಕುರಿತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಹಾಗೂ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ, ಅದೂ ಜನರಿಗೆ? ನಮ್ಮ ಬದ್ಧತೆ, ಅಚಲತೆ, ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗೆ ಖಂಡಿತಾ ಇಲ್ಲ. ಈ ಗುಣಗಳು ನಿಮಗೆ ಅನ್ವಯ ಆಗುವುದೂ ಇಲ್ಲ. ಏನಂತೀರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!