ಹೊಸದಿಗಂತ ವರದಿ ಬಳ್ಳಾರಿ:
ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದ ಕುಮಾರಸ್ವಾಮಿ ಯಿಂದ ಸಮುದಾಯದವರಿಗೆ ನೋವಾಗಿದೆ, ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು, ನಿರ್ಲಕ್ಷಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಬ್ರಾಹ್ಮಣ ಒಕ್ಕೂಟದ ಉಪಾಧ್ಯಕ್ಷ ಡಾ.ಡಿ.ಶ್ರೀನಾಥ್ ಅವರು ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಹ್ಲಾದ್ ಜೋಶಿ ಅವರು ಪ್ರಭಾವಿ ಸಚಿವರಾಗಿದ್ದಾರೆ, ಸರಳ, ಸಜ್ಜನಿಕೆಗೆ ಹೆಸರಾದ ಪ್ರಹ್ಲಾದ್ ಜೋಶಿ ಅವರ ಬಗ್ಗೆ ಹಾಗೂ ಸಮುದಾಯದ ಬಗ್ಗೆ ಕುಮಾರಸ್ವಾಮೀ ಲಘುವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ.
ಅವರನ್ನು ಮಹಾರಾಷ್ಟ್ರ ಮೂಲದ ಪೇಶ್ವೆ ಎಂದು ಜರಿದಿರುವುದು ಸರಿಯಲ್ಲ, ಜೋಶಿ ಅವರು ಮಾಧ್ವ ಬ್ರಾಹ್ಮಣರು ಎಂಬುದನ್ನು ಕುಮಾರಸ್ವಾಮೀ ಮೊದಲು ಅರಿತುಕೊಳ್ಳಲಿ, ಈ ಹಿಂದೆ ರಾಮಕೃಷ್ಣ ಹೆಗಡೆ ಅವರನ್ನು ದೇವೇಗೌಡರು ಸಾರ್ವಜನಿಕವಾಗಿ ಅವಮಾನಿಸಿರುವುದು, ವೈ.ಎಸ್.ದತ್ತಾ ಅವರನ್ನು ನಡೆಸಿಕೊಂಡ ರೀತಿಯನ್ನು ಬ್ರಾಹ್ಮಣರು ಮರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಕುಟುಂಬದ ಬಗ್ಗೆ ಗೌರವ, ಅಭಿಮಾನವಿದೆ, ಆದರೇ, ಸಮುದಾಯದವರ ಬಗ್ಗೆ ಲಘುವಾಗಿ ಮಾತನಾಡಿರುವುದು ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ, ಕುಮಾರಸ್ವಾಮೀ ಆಡಿದ ಮಾತುಗಳು ಇಡೀ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ, ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರಾಜಕಾರಣದಲ್ಲಿ ಸುಧಾರಣೆ ತರಬೇಕಾದರೇ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ವಿದಾನಸಭೆ ಪ್ರವೇಶಿಸಬೇಕು, ಮೌಲ್ಯಾದಾರಿತ ರಾಜಕೀಯ ನಿರ್ಮಾಣ ಆಗಬೇಕಾದರೇ ಬ್ರಾಹ್ಮಣರು ರಾಜಕೀಯದಲ್ಲಿ ಆಸಕ್ತಿ ಆಸಕ್ತಿ ತೋರಬೇಕು, ಪ್ರಸ್ತುತ ದಿನಗಳಲ್ಲಿ ರಾಜ್ಯದ ನಾನಾ ಕಡೆ 25 ಸ್ಥಾನಗಳಲ್ಲಿ ಗೆಲ್ಲುವ ಅರ್ಹತೆ ಇದ್ದರೂ ವಿಪ್ರ ಮುಖಂಡರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ, ಇದು ಅತ್ಯಂತ ಬೇಸರ ಸಂಗತಿಯಾಗಿದೆ, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ನಮ್ಮ ಮತಗಳಷ್ಟೇ ಬೇಕು, ಮುಂದೆ ಬಂದಾಗ ಅವಕಾಶ ಕಲ್ಪಿಸೋಲ್ಲ, ಇದೇ ರೀತಿ ಮುಂದುವರೆದರೇ ಮೂರು ಪಕ್ಷಗಳಿಗೂ ಮುಳುವಾಗಲಿದೆ ಎಂದರು.