ಕಲೆಕ್ಷನ್ ಕಿಂಗ್ ಅಪ್ಪ ಆದ್ರೆ, ಕಲೆಕ್ಷನ್ ಪ್ರಿನ್ಸ್ ಮಗ- ಯತೀಂದ್ರ, ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ವಿಡಿಯೋ ವೈರಲ್ ವಿಚಾರವಾಗಿ ಖಾರವಾಗಿ ಟ್ವೀಟ್‌ ಮಾಡಿರುವ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಅಪ್ಪ-ಮಗ ಇಬ್ಬರೂ ಕಲೆಕ್ಷನ್‌ ಕಿಂಗ್‌ಗಳೇ ಎಂದು ಆರೋಪಿಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಅವರು..ʻಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕಾಂಗ್ರೆಸ್‌ ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆʻ ಎಂದು ಟೀಕೆ ಮಾಡಿದರು.

ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ಎಂದು ಪ್ರಶ್ನಿಸಿದರು.

ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ‘ಒಳ ವಸೂಲಿ ಸಚಿವಾಲಯ’ದ ಸಚಿವರಾ? ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ?  ಈಗ ಹೇಳಿ ಸಿದ್ದರಾಮಯ್ಯವರೇ ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? ಎಂದು ಪ್ರಶ್ನೆಗಳು ಸುರಿಮಳೆ ಹರಿಸಿದರು.

ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ ‘ಸುಲಿಗೆಪುತ್ರ’ ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ!! ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ?ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!