ದಿಗಂತ ವರದಿ ಹುಬ್ಬಳ್ಳಿ:
ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣಗಳ ವಿಷಾಯಾಂತರ ಮಾಡುವ ಉದ್ದೇಶದಿಂದ ಶಾಸಕರ ಖರೀದಿಯ ಸುಳ್ಳು ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಉರುಳಿಸಲು ಶಾಸಕರಿಗೆ ಕೋಟ್ಯಾಂತರ ರೂಪಾಯಿ ಆಮೀಷವೊಡ್ಡಿದ್ದಾಗಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕಲಾಗುವುದು ಎಂದರು.
ಕಾಂಗ್ರೆಸದ ಶಾಸಕ ರವಿಕುಮಾರ್ ಗಣಿಗ ಅವರನ್ನು ಬಲಿಪಶುವನ್ನಾಗಿ ಮಾಡುತ್ತಿದೆ. ಅವರು ಮೊದಲ ಬಾರಿ ಶಾಸಕರಿದ್ದಾರೆ. ಯಾರೋ ಹೇಳಿದ್ದಾರೆಂದು ಹೇಳಿಕೆ ಕೊಡಬೇಡಿ ಎಂದು ಕಿಡಿಕಾರಿದರು.
100 ಕೋಟಿ ಆಫರ್ ಮಾಡಿದ್ದಾಗಿ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಆ ಹಣ ಎಲ್ಲಿದೆ ಎಂದು ಹೇಳಲಿ. ಒಬ್ಬಿಬ್ಬರು ಶಾಸಕರು ಹಣ ಪಡೆದರೆ ಏನೂ ಆಗುವುದಿಲ್ಲ. ಬಿಜೆಪಿ 66 ಶಾಸಕರ ಬಲ ಹೊಂದಿದೆ. ಅದರಲ್ಲಿ ಇಬ್ಬರು ಪಕ್ಷದ್ರೋಹ ಮಾಡಿದ್ದಾರೆ. ಇನ್ನೂ 64 ಶಾಸಕರು ಸರ್ಕಾರ ರಚನೆಗೆ ಬೇಕು. ಶಾಸಕರ ಆರೋಪದ ಲೆಕ್ಕಾಚಾರದಂತೆ ಅದಕ್ಕೆ ಅಂದಾಜು 6,600 ಕೋಟಿ ರೂ. ಬೇಕು. ಇಷ್ಟು ಹಣ ಎಲ್ಲಿಂದ ಬರುತ್ತದೆ ? ಬಾಲಿಶತನಕ್ಕೂ ಮಿತಿ ಬೇಕು ಎಂದು ವ್ಯಂಗ್ಯವಾಡಿದರು.