ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ: ರಸ್ತೆ ಸಂಚಾರ ಬಂದ್‌, ಮನೆ- ದೇಗುಲಕ್ಕೆ ನುಗ್ಗಿದ ನೀರು

ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಬಳಿಕದಿಂದ ವ್ಯಾಪಕ ಮಳೆ ಆಗುತ್ತಿದ್ದು, ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಪ್ರವಾಹದಿಂದ ರಸ್ತೆ, ಮನೆಗಳು, ಕೃಷಿ ನಾಶಗೊಂಡಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ರಸ್ತೆಗಳ ಮೇಲೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಸಂಪರ್ಕ ಕಡಿತವಾಗಿ ಜನರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಮಂಗಳವಾರ ಬೆಳಗ್ಗೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಸ್ತೆ ಸಂಪರ್ಕಗಳು ಸಹಜ ಸ್ಥಿತಿಗೆ ಬಂದಿವೆ. ಆದರೆ ಏನೆಕಲ್ ಭಾಗದಲ್ಲಿ ಮಳೆ ಪ್ರಮಾಣ ಜಾಸ್ತಿ ಇದ್ದು ರಸ್ತೆ ಸಂಪರ್ಕ ಕಡಿತವಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತು ಊರಿನ ಸುತ್ತಮುತ್ತ ವ್ಯಾಪಕ ಮಳೆ ಆಗಿರುವುದರಿಂದ ದೇವಸ್ಥಾನದ ಒಳಗೆ ಮತ್ತು ಅನೇಕ ಮನೆಗಳಿಗೆ ನೀರು ನುಗ್ಗಿದೆ .
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೋಮವಾರ ರಾತ್ರಿಯಿಂದ ಸುಬ್ರಹ್ಮಣ್ಯದಲ್ಲಿ ಉಪಸ್ಥಿತರಿದ್ದು, ನೆರೆಯ ಪರಿಸ್ಥಿತಿಯನ್ನು ನಿಯಂತ್ರಿಸವಲ್ಲಿ ಎಸಿ ಮತ್ತು ತಹಶೀಲ್ದಾರ್ ಹಾಗೂ ಇತರ ಸಿಬ್ಬಂದಿ ಜೊತೆಗೆ ಅಗತ್ಯ ಕ್ರಮವನ್ನು ಕೈಗೊಂಡಿರುತ್ತಾರೆ.
NDRF ತಂಡ ಈಗಾಗಲೇ ಸುಬ್ರಹ್ಮಣ್ಯದಲ್ಲಿದ್ದು, ರಕ್ಷಣೆ, ಪರಿಹಾರ ಕಾರ್ಯ ನಿರ್ವಹಿಸುತ್ತಿದೆ. SDRF ತಂಡ ಕೊಲ್ಲಮೊಗರು ಭಾಗಕ್ಕೆ ಭೇಟಿ ನೀಡಿ ನಂತರ ಸುಬ್ರಹ್ಮಣ್ಯದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸುಳ್ಯ ಮತ್ತು ಪುತ್ತೂರಿನ ಅಗ್ನಿಶಾಮಕ ತಂಡಗಳು ರಾತ್ರಿಯಿಂದ ಕೊಲ್ಲಮೊಗರು ಹಾಗೂ ಸುಳ್ಯ ಸುಬ್ರಹ್ಮಣ್ಯದ ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!