ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ 17ರ‌ ತರುಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಜಗತ್ತಿನಲ್ಲಿ ಎಂತೆಂತಹ ಸಾಹಸಿಗಳು ಇರುತ್ತಾರೆ ಎಂದರೆ ಅವರಿಗೆ ಪ್ರಪಂಚವೂ ಮಿತಿಯಲ್ಲ. ಬೆಲ್ಜಿಯನ್ -ಬ್ರಿಟಿಷ್ ಪೈಲೆಟ್ ಮ್ಯಾಕ್ ರುದರ್ಫೋರ್ಡ್ ಎಂಬಾತ ಅಂತಹದ್ದೊಂದು ಸಾಧನೆ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದಾನೆ. 17ರ ಹರೆಯದ ತರುಣ ರುದರ್ಫೋರ್ಡ್ ಏಕಾಂಗಿಯಾಗಿ ವಿಶ್ವ ಪರ್ಯಟನೆ ಕೈಗೊಂಡಿದ್ದು, ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಪೈಲಟ್​ ಎಂಬ ಗಿನ್ನೆಸ್ ವಿಶ್ವ  ದಾಖಲೆಗೆ ಪಾತ್ರನಾಗಿದ್ದಾನೆ.

ಮತ್ತೊಂದು ವಿಚಾರವೆಂದರೆ ಆತನ ಸಹೋದರಿ 19 ವರ್ಷದ ಯುವ ಪೈಲಟ್‌ ಝರಾ ರುದರ್‌ಫೋರ್ಡ್ ಕೆಲವೇ ದಿನಗಳ ಹಿಂದೆ ಏಕಾಂಗಿಯಾಗಿ 41 ದೇಶಗಳನ್ನು ಸುತ್ತಿ ಈ ಸಾಧನೆ ಮಾಡಿದ ಕಿರಿಯ ಮಹಿಳೆಯೆಂಬ ದಾಖಲೆ ಬರೆದಿದ್ದಳು. ಅಕ್ಕನ ಸಾಧನೆಯನ್ನು ನೋಡಿ ತಮ್ಮನಿಗೆ ಅಂತಹದ್ದೊಂದು ಹಂಬಲ ಚಿಗುರೊಡೆದಿತ್ತು.

ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಆರಂಭಿಸಿದ ಮ್ಯಾಕ್‌, ಈ ವರ್ಷದ ಮಾರ್ಚ್ 23 ರಂದು ಬಲ್ಗೇರಿಯಾದ ರಾಜಧಾನಿ ಸೋಫಿಯಾದಿಂದ ಬುಲ್ಲಿ ಎಂಬ ಹೆಸರಿನ ಸಣ್ಣ ವಿಮಾನದಲ್ಲಿ ಪ್ರಯಾಣ ಪ್ರಾರಂಭಿಸಿದ. ಅಲ್ಲಿಂದಾಚೆಗೆ ಆತ ಏಕಾಂಗಿಯಾಗಿ 5 ಖಂಡಗಳು ಸೇರಿದಂತೆ ಬರೋಬ್ಬರಿ 52 ದೇಶಗಳನ್ನು ಸುತ್ತಿದ.
ಹೇಗಿತ್ತು ಪ್ರಯಾಣ:
ಆತ ಪ್ರಯಾಣಿಸಿದ ಬುಲ್ಲಿ ವಿಮಾನ ಹೆಚ್ಚಿನ ಕಾರ್ಯಕ್ಷಮತೆಯ ಅಲ್ಟ್ರಾಲೈಟ್ ವಿಮಾನವಾಗಿದ್ದು ಅದು ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ.

ಮ್ಯಾಕ್‌ ಪ್ರಯಾಣದದ ವೇಳೆ ಏಷ್ಯಾದಲ್ಲಿ ವಿಪರೀತ ಮಳೆ, ಸುಡಾನ್‌ನಲ್ಲಿ ಮರಳು ಬಿರುಗಾಳಿ, ದುಬೈನ ವಿಪರೀತ ಶಾಖ, ಭಾರತದಲ್ಲಿ ವಿಮಾನ ನಿಲ್ದಾಣ ಮುಚ್ಚುವಿಕೆ ಮತ್ತು ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿ ತನ್ನ ಗಮ್ಯವಾದ ಯೂರೋಪ್‌ ಗೆ ಮರಳಿದ್ದಾನೆ. ಮಾರ್ಗದಲ್ಲಿ ಎದುರಾದ ಅಡೆತಡೆಗಳಿಂದಾಗಿ ಪ್ರವಾಸವು ನಿರೀಕ್ಷೆಗಿಂತ ಹೆಚ್ಚು ಕಾಲ ಸಾಗಿತು. 44 ದಿನಗಳಲ್ಲಿ 40,072 ಕಿಮೀ ದೂರವನ್ನು ಕ್ರಮಿಸಿ ವಿಶ್ವದಾಖಲೆಗೆ ಭಾಜನರಾಗಿದ್ದಾನೆ.

ಆತನ ಅಕ್ಕ ಜಾರಾ 14ನೇ ವಯಸ್ಸಿಗೆ ವಿಶ್ವಸುತ್ತಿದ್ದರೆ, ಮ್ಯಾಕ್ 15ನೇ ವಯಸ್ಸಿಗೆ ಪ್ರಪಂಚ ಪರ್ಯಟನೆ ಮಾಡಿದ್ದು ವಿಶೇಷ. ಈ ಹಿಂದೆ ಬ್ರಿಟನ್​ ಟ್ರಾವಿಸ್ ಲುಡ್ಲೊ (18) ಇದಕ್ಕೂ ಮುನ್ನ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮ್ಯಾಕ್‌ ಮುರಿದ್ದಾನೆ. ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಹಸ ಮೆರೆದಿರುವ ಮ್ಯಾಕ್‌ ಗೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!