ಕೊಡಗು: ಆ.28ರಂದು ಕೊಡಗಿಗೆ ಬರಲಿದೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ

ಹೊಸದಿಗಂತ ವರದಿ ಮಡಿಕೇರಿ:
ಬ್ರಿಟಿಷರ ವಿರುದ್ಧ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ಆಂಧ್ರಪ್ರದೇಶದ ವಿಜಯವಾಡದಲ್ಲಿ ತಯಾರಾಗಿರುವ 11 ಅಡಿ ಎತ್ತರದ ಕಂಚಿನ ಪ್ರತಿಮೆ ಆ.28ರಂದು ಮಡಿಕೇರಿ ತಲುಪಲಿದೆ.ಆ.27 ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪಲಿರುವ ಪ್ರತಿಮೆಯ ಯಾತ್ರೆಗೆ ಆ.28 ರಂದು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದು, ಅಂದು ಮಧ್ಯಾಹ್ನ 2.30 ಗಂಟೆಗೆ ಪ್ರತಿಮೆ ಕೊಡಗು ಪ್ರವೇಶಿಸಲಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.

ಭಾನುವಾರ ಶಿರಂಗಾಲದ ಮೂಲಕ ಕೊಡಗು ಜಿಲ್ಲೆಗೆ ಪ್ರತಿಮೆ ಪ್ರವೇಶ ಮಾಡಲಿದ್ದು ಪ್ರತಿಮೆ ಹೊತ್ತ ವಾಹನದ ಮುಂಭಾಗದಲ್ಲಿ ಕೆದಂಬಾಡಿ ರಾಮಯ್ಯಗೌಡರ ಅವರ ಭಾವಚಿತ್ರದೊಂದಿಗೆ ಅಲಂಕೃತ ಬೆಳ್ಳಿರಥ ಇರಲಿದೆ. ಗುಡ್ಡೆಹೊಸೂರು, ಸುಂಟಿಕೊಪ್ಪದ ಮೂಲಕ ಸಂಜೆ 4.30 ಗಂಟೆಗೆ ಸುದರ್ಶನ ವೃತ್ತಕ್ಕೆ ಬರುವ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುವುದು.

ಕೆದಂಬಾಡಿ ರಾಮಯ್ಯ ಗೌಡರ ಸಹವರ್ತಿ ಸ್ವಾತಂತ್ರ‍್ಯ ಹೋರಾಟಗಾರ ಅಪ್ಪಯ್ಯಗೌಡರ ಪ್ರತಿಮೆ ಬಳಿ ನಾಡಿನ ಹಿರಿಯರು, ಜನಪ್ರತಿನಿಧಿಗಳು, ಕೆದಂಬಾಡಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಗೌರವ ಸಲ್ಲಿಸಲಿದ್ದಾರೆ. ನಂತರ ವಾಹನ ಜಾಥಾದೊಂದಿಗೆ ತಿಮ್ಮಯ್ಯ ವೃತ್ತ, ಬಸ್ ನಿಲ್ದಾಣ, ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿ ಸಾಗಿ ಕೊಡಗು ಗೌಡ ಸಮಾಜದ ಆವರಣದಲ್ಲಿ ರಥ ತಂಗಲಿದೆ.

ಆ.29 ರಂದು ಬೆಳಗ್ಗೆ 7 ಗಂಟೆಗೆ ನಗರದ ಕೋಟೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ರಥವು ಸುಮಾರು 300ಕ್ಕೂ ಹೆಚ್ಚು ವಾಹನಗಳ ಜಾಥಾದೊಂದಿಗೆ ಸುಳ್ಯ ತಲುಪಲಿದೆ.ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆ ಹುಟ್ಟೂರು ಸುಳ್ಯಕ್ಕೆ ಆ.29ರಂದು ತಲುಪಲಿದ್ದು, ಸುಳ್ಯದಿಂದ ಮಂಗಳೂರಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ಸೋಮಣ್ಣ ವಿವರಿಸಿದ್ದಾರೆ.

ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ಅನುದಾನ ಮಂಜೂರು ಮಾಡಿದೆ. ಈಗಾಗಲೇ ಪ್ರತಿಮೆ ಪ್ರತಿಷ್ಠಾಪನೆಯ ಸ್ಥಳದ ಅಂಗಣ ಮತ್ತು ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.

ಅಕ್ಟೋಬರ್ ತಿಂಗಳಿನಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿಗಳ ನೇತೃತ್ವದಲ್ಲಿ ಈ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೆದಂಬಾಡಿ ರಾಮಯ್ಯ ಗೌಡರ ಬಗ್ಗೆ:
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದುಷ್ಟ ಆಡಳಿತದ ವಿರುದ್ಧ ಸಮರ ಸಾರಿ ಕೊಡಗು ಹಾಗೂ ಮಂಗಳೂರು ಪ್ರಾಂತ್ಯದಿಂದ ಬ್ರಿಟೀಷ್ ಸೈನ್ಯವನ್ನು ಹೊಡೆದೋಡಿಸಿ ಸ್ವಾತಂತ್ರ‍್ಯದ ಧ್ವಜವನ್ನು ಹಾರಿಸಿ 13 ದಿವಸಗಳ ಕಾಲ ಆಡಳಿತ ನಡೆಸಿದ ಯೋಧ ಪಡೆಯ ಮುಂಚೂಣಿ ನಾಯಕರಲ್ಲಿ ಹುತಾತ್ಮರಾದ ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕೆದಂಬಾಡಿ ರಾಮಯ್ಯ ಗೌಡರು ಪ್ರಮುಖರು.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ, ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಬೆಳಕು ಚೆಲ್ಲದ ಮಹಾನ್ ನಾಯಕನ ಸಾಧನೆಗೆ ಗೌರವ ನೀಡುವ ಕಾಲ ಸನ್ನಿಹಿತವಾಗುತ್ತಿದೆ. ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಆರಂಭವಾಗಿದ್ದು 1857 ರಲ್ಲಿ ಎಂದು ಉಲ್ಲೇಖಿಸಲಾಗಿದ್ದರೂ ಅದಕ್ಕೂ 20 ವರ್ಷ ಮೊದಲೇ ಬ್ರಿಟಿಷರ ದಾಸ್ಯದ ಪದ್ಧತಿಯನ್ನು ವಿರೋಧಿಸಿ ಹೋರಾಟ ಮಾಡಿದವರಿವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!