ಸಿದ್ದರಾಮಯ್ಯ ಬಿತ್ತಿದ ಜಾತಿ ವಿಷ ಬೀಜದ ಮುಂದುವರಿದ ಭಾಗವೇ ಹಿಜಬ್ ಘರ್ಷಣೆ: ಸಚಿವ ಸುನೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಿದ್ದರಾಮಯ್ಯ ಬಿತ್ತಿದ ಜಾತಿ ವಿಷ ಬೀಜದ ಮುಂದುವರಿದ ಭಾಗವೇ  ಹಿಜಬ್ ಘರ್ಷಣೆ. ಕರ್ನಾಟಕವನ್ನು ತಾಲೀಬಾನ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನ ಮಾನಸದಲ್ಲಿ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಬೇಕು ಎಂಬ ಅಭಿಪ್ರಾಯವಿದೆ. ಖುಷಿ ಬಂದಾಗ ಒಬ್ಬೊಬ್ಬರು ಒಂದೊಂದು ವಸ್ತ್ರ ಹಾಕಿಕೊಂಡು ಬರೋದಕ್ಕೆ ಅಲ್ಲ. ನಿಯಮಗಳು ಅನ್ನೋದಕ್ಕಿಂತ ಇದೊಂದು ಸಂಪ್ರದಾಯವಾಗಿದೆ ಎಂದರು.

ಧರ್ಮದ ಕಾರಣಕ್ಕೆ ಮತೀಯವಾದದ ಕಾರಣಕ್ಕೆ ಹೀಗೆ ವಸ್ತ್ರ ಹಾಕಿಕೊಂಡು ಬರುವುದನ್ನು ನಾವು ಸಹಿಸಲು ಆಗುವುದಿಲ್ಲ. ಕರ್ನಾಟಕ, ಉಡುಪಿ, ಮಂಗಳೂರು ಜಿಲ್ಲೆಯನ್ನು ತಾಲಿಬಾನ್ ಮಾಡಲು ಬಿಡೋದಿಲ್ಲ ಎಂದು ಹೇಳಿದರು.

ಸಮವಸ್ತ್ರ ನಿಯಮಕ್ಕೆ ಸಮಿತಿ ರಚನೆ ಮಾಡೋದಾಗಿ ಶಿಕ್ಷಣ ‌ಇಲಾಖೆ ಈಗಾಗಲೇ ಸ್ಪಷ್ಟ ಮಾಡಿದೆ. ಶೀಘ್ರವಾಗಿ ಸುತ್ತೋಲೆ ನೀಡೋದಾಗಿ ಹೇಳಿದೆ. ವಿದ್ಯಾರ್ಥಿಗಳು ಕೋರ್ಟ್ ಗೆ ಹೋಗ್ತಾರೆ ಅಂದ್ರೆ ಇದರ ಹಿಂದೆ ಯಾವ ಸಂಘಟನೆ ಇದೆ? ಸರಕಾರಿ ಶಾಲೆಗೆ ಶುಲ್ಕ ಕಟ್ಟೋಕೆ ಕಷ್ಟ ಅಂತಿರೋ ಒಂದು ವಲಯದವರು ಕೋರ್ಟ್ ಗೆ ಹೋಗ್ತಾರೆ ಅಂದ್ರೆ ಇದ್ರಲ್ಲಿ ಯಾರ ಕೈವಾಡ ಇದೆ? ಎಂದು ಪ್ರಶ್ನಿಸಿದ ಅವರು, ಮತೀಯ ಸಂಗತಿಗಳನ್ನು ವಿಜೃಂಭಿಸುವ ಕೆಲಸವನ್ನು ಶಾಲಾ ಕ್ಯಾಂಪಸ್ ನಲ್ಲಿ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣದ ಮಧ್ಯೆ, ಯುವಕರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಸಿದ್ದರಾಮಯ್ಯ, ಖಾದರ್ ಯಾವಾಗಲು ಮತೀಯವಾಗಿಯೇ ಅಲೋಚನೆ ಮಾಡ್ತಾರೆ. ಜಾತಿ ಜಾತಿಗಳ ನಡುವೆ ಎತ್ತು ಕಟ್ಟುವ ಕೆಲಸ ಈ ರಾಜ್ಯದಲ್ಲಿ ಮಾಡಿದ್ದೆ ಸಿದ್ದರಾಮಯ್ಯ ಎಂದು ಆರೋಪಿಸಿದರು.

ಪ್ರವಾಸ ಭಾಗ್ಯ, ಶಾದಿ ಭಾಗ್ಯ ಇಟ್ಟುಕೊಂಡು ಎಲ್ಲದರ ನಡುವೆ ಜಾತಿ ವಿಷ ಬೀಜ ಬಿತ್ತಿದವರು ಸಿದ್ದರಾಮಯ್ಯ. ಆ ವಿಷ ಬೀಜದ ಮುಂದುವರೆದ ಭಾಗವೇ ಇದು. ಮೊದಲು ಇಸ್ಲಾಂ ಸಂಘಟನೆಗಳು ಇದರ ಹಿಂದೆ ಅಂತ ಅನ್ನಿಸುತ್ತಿತ್ತು. ಈಗ ಸಿದ್ದರಾಮಯ್ಯ, ಖಾದರ್ ಹೇಳಿಕೆ ನೋಡಿದ್ರೆ ಇದರ ಹಿಂದೆ ಇವರು ಇದ್ದಂತೆ ಕಾಣ್ತಿದೆ ಎಂದು ಆರೋಪಿಸಿದರು.

ಕ್ಯಾಂಪಸ್ ನಲ್ಲಿ ಶಿಕ್ಷಣದ ಸರಸ್ವತಿ ಆರಾಧನೆ ನಡೆಯಬೇಕು. ಇದನ್ನು ಸರಕಾರ ಸಹಿಸೋದಿಲ್ಲ. ಇದರ ಹಿಂದೆ ದೊಡ್ಡ ಹುನ್ನಾರ ಇದೆ. ಇಲ್ಲಿ ಆದ ಘಟನೆಗೆ ಕಾಶ್ಮೀರದಲ್ಲಿ ಇರೋರು ಮಾತಾಡ್ತಾರೆ ಅಂದ್ರೆ ಇದರ ಜಾಲ ದೊಡ್ಡದಿದೆ. ಇದರ ಹಿಂದೆ ದೊಡ್ಡ ಷಡ್ಯಂತರ ಇದೆ. ವ್ಯವಸ್ಥಿತ ಪಿತೂರಿ ಇದೆ ಎಂದು ಅಭಿಪ್ರಾಯಪಟ್ಟರು.

ಇದರಿಂದ‌ ಇನ್ನೇನನ್ನೋ ಕರ್ನಾಟಕದಲ್ಲಿ ಮಾಡುವ ಹುನ್ನಾರ ಇದೆ. ಇದಕ್ಕೆ ಕಾಂಗ್ರೆಸ್ ‌ಪರೋಕ್ಷವಾಗಿ ನೆರಳನ್ನು ಕೊಡುತ್ತಿದೆ. ಇದನ್ನು ಸರಕಾರ ಮಟ್ಟ ಹಾಕುತ್ತದೆ. ಕಾನೂನು ಚೌಕಟ್ಟಿನಲ್ಲಿ ಆದಷ್ಟು ಬೇಗ ಸುತ್ತೋಲೆ ಮಾಡ್ತೀವಿ ಎಂದು ಸಚಿವ ಸುನೀಲ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!