ಹಿಜಾಬ್ ಹೋರಾಟಗಾರ್ತಿಯರದ್ದು ಹೊರ ದೇಶ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದೇ ಉದ್ದೇಶ : ಸಚಿವೆ ಶೋಭಾ

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಹೈಕೋರ್ಟ್, ಸರಕಾರದ ಆದೇಶವನ್ನು ಮೀರಿ ಹಿಜಾಬ್ ಗೆ ಬೆಂಬಲ ಕೊಡಲಾಗುತ್ತಿದೆ. ಮಾಧ್ಯಮಗಳಲ್ಲಿ ಬಹಳ ಪ್ರಚಾರ ಪಡೆಯುವುದು ಮತ್ತು ಯಾವುದೋ ದೇಶದಲ್ಲಿ ಚರ್ಚೆ ಆಗುವಂತೆ ಮಾಡುವುದು ಅವರ ಉದ್ದೇಶ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಜಾಬ್ ಗಾಗಿ ಒತ್ತಾಯ ಮಾಡುವವರು ಈ ನೆಲದ ಕಾನೂನು ಪಾಲಿಸುತ್ತಿಲ್ಲ. ಮನಬಂದಂತೆ ನಡೆದುಕೊಳ್ಳಬಹುದು ಎಂಬುದು ಮತ್ತೆ ಸಾಬೀತಾಗಿದೆ. ಸರಕಾರ ಪೊಲೀಸ್ ವ್ಯವಸ್ಥೆ ಕೋರ್ಟು ಯಾವುದಕ್ಕೂ ಗೌರವ ಕೊಡುತ್ತಿಲ್ಲ. ಪೊಲೀಸ್ ಸ್ಟೇಷನ್‌ಗೆ ದಾಳಿ ಮಾಡುವುದು ಅವರ ಮಾನಸಿಕತೆಯಾಗಿದೆ ಎಂದರು.

ಹಾಲ್ ಟಿಕೆಟ್ ಪಡೆದು ಹಿಜಾಬ್ ತೆಗೆಯದೆ ಪರೀಕ್ಷೆ ಬರೆಯಲು ಮುಂದಾಗಿದ್ದರು. ಭಯೋತ್ಪಾದಕರು ಬೆಂಬಲ ಕೊಡುವ ರೀತಿಯಲ್ಲಿ ಇವರು ನಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಈ ರೀತಿ ನಡೆಯುತ್ತಿದೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದ ಸಚಿವೆ ಶೋಭಾ ಕರಂದ್ಲಾಜೆ, ಹಿಜಾಬ್ ಗೆ ಬೆಂಬಲ ಕೊಟ್ಟ ಸಂಘಟನೆ ನಿಮ್ಮ ಬದುಕಿನ ಜೊತೆ ಬರುವುದಿಲ್ಲ. ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕೆಲ ಸಂಘಟನೆಗಳು ಹೋರಾಟ ಮಾಡುತ್ತಿವೆ. ಭಾರತದಲ್ಲಿ ನಿಮ್ಮದು ಏನು ನಡೆಯುವುದಿಲ್ಲ, ಇಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ ಎಂದು ಹೇಳಿದರು.

ಪರೀಕ್ಷೆ ಬರೆಯಿರಿ, ಡಿಗ್ರಿ ಓದಿ ಕೆಲಸ ಗಿಟ್ಟಿಸಿಕೊಳ್ಳಿ. ಈ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದು ನಮ್ಮ ಸಂಕಲ್ಪ. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ, ಗೌರವ ಬೇಕಾಗಿದೆ. ಮಹಿಳೆಯರು ಶಿಕ್ಷಣ ಪಡೆದು ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಆಲಿಯಾ ಅಸಾದಿಗೆ ಶೋಭಾ ತಿರುಗೇಟು:
ನಿನ್ನೆ ರಾತ್ರಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಟ್ವೀಟ್ ಮಾಡಿ, ಭಾರತ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದ್ದರು. ಆಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು. ಭಾರತವನ್ನು ಬಿಟ್ಟು ಹೋದವರು ಮತ್ತು ಭಾರತವನ್ನು ಬಿಟ್ಟು ಹೋದ ಭಾಗ ಏಕತೆಯಿಂದ ಬದುಕುತ್ತಿಲ್ಲ. ಹಿಂದುಗಳು ಅಲ್ಪಸಂಖ್ಯಾತರ ಪರಿಸ್ಥಿತಿಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತು. ಅಲ್ಲೆಲ್ಲಾ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ವಿದ್ಯೆ, ಶಿಕ್ಷಣ, ಔಷಧಿ, ಆಹಾರ ಕೊಟ್ಟು ಎಲ್ಲರನ್ನು ಸಾಕುತ್ತಿದೆ ಎಂದರು.

ರಾಜ್ಯದ್ಯಂತ ಪೊಲೀಸರ ಮೇಲೆ ದಾಳಿ ನಡೆಯುತ್ತಿದೆ. ಕೆಜೆ ಹಳ್ಳಿ ಡಿಜೆ ಹಳ್ಳಿ, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ದಾಷ್ಟ್ರ್ಯ, ದರ್ಪ, ಅಹಂಕಾರವನ್ನು ತೋರಿಸುತ್ತದೆ. ಸಂಖ್ಯೆ ಜಾಸ್ತಿ ಇದ್ದಲ್ಲಿ ಪೊಲೀಸರನ್ನು ಬೆದರಿಸುವ ಸಂದೇಶ ಕೊಡುತ್ತಿದ್ದಾರೆ. ಬಹುಸಂಖ್ಯಾತರು, ಅಲ್ಪಸಂಖ್ಯಾತರು ಒಟ್ಟಾಗಿ ಬದುಕಬೇಕು ಎಂಬುದು ನಮ್ಮ ಸಂದೇಶ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸರಕಾರಿ ವ್ಯವಸ್ಥೆಯ ಮೇಲೆ ದೌರ್ಜನ್ಯ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಮಚ್ಚು, ಲಾಂಗು ಹಿಡಿದು ರಸ್ತೆಯಲ್ಲಿ ಓಡಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ವ್ಯವಸ್ಥಿತವಾಗಿ ಕಲ್ಲು ಸಂಗ್ರಹ ಮಾಡಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗೆ ಕಲ್ಲು ತೂರಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ, ಕಠಿಣ ಶಿಕ್ಷೆ ಆಗಬೇಕು ಎಂದು ಕರಂದ್ಲಾಜೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!