ಕೊಡಗಿಗೂ ಕಾಲಿಟ್ಟ ಹಿಜಾಬ್ ವಿವಾದ: ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಹೊಸದಿಗಂತ ವರದಿ, ಕೊಡಗು:

ಉಡುಪಿ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಇದೀಗ ಕೊಡಗಿಗೂ ಕಾಲಿರಿಸಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದಲ್ಲಿ ತಮಗೂ ಕೇಸರಿ ಶಲ್ಯ ಧರಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಹಿಂದೂ ವಿದ್ಯಾರ್ಥಿಗಳಿಂದ‌ ಕೇಳಿ ಬಂದಿದೆ.
ಅದರಂತೆ ಸೋಮವಾರ ಕೊಡಗಿನ ಮಡಿಕೇರಿ, ಶನಿವಾರಸಂತೆ ಮುಂತಾದ ಕಡೆಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಆಗಮಿಸಿದರು.
ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ಕಾಲೇಜು ಕ್ಯಾಂಪಸ್ ಪ್ರವೇಶಿಸಿದರು.
ಬಳಿಕ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾದ ವಿದ್ಯಾರ್ಥಿ ಮುಖಂಡರು, ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡಿದರೆ ತಮಗೆ ಕೇಸರಿ ಶಲ್ಯ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇಲ್ಲವಾದಲ್ಲಿ ಎಲ್ಲರಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ಗಮನಸೆಳೆದರು.
ಕಾಲೇಜು ಪ್ರಾಂಶುಪಾಲರು ಮಾತನಾಡಿ, ಸರಕಾರದ‌ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪ್ರಸಕ್ತ ಕಾಲೇಜಿಗೆ ಹಂತಹಂತವಾಗಿ ಸಮವಸ್ತ್ರ ಪೂರೈಕೆಯಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಣೆಯಾದ ಬಳಿಕ ಎಲ್ಲರಿಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗುವುದು ಎಂದು ಮನವರಿಕೆ ಮಾಡಿದರು.
ಅತ್ತ ಶನಿವಾರಸಂತೆಯಲ್ಲೂ ಅಲ್ಲಿನ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಲ್ಯ ಧರಿಸಿ ಕಾಲೇಜು ಪ್ರವೇಶಿಸಿದರು. ಕಾಲೇಜು ಪ್ರಾಂಶುಪಾಲರ ಕೋರಿಕೆ ಮೇರೆಗೆ ಸ್ಥಳಕ್ಕಾಗಮಿಸಿದದ ಪೊಲೀಸರು, ಮುಸ್ಲಿಂ ವಿದ್ಯಾರ್ಥಿನಿಯರು‌ ಧರಿಸಿದ ಹಿಜಾಬ್ ಹಾಗೂ ಹಿಂದೂ ವಿದ್ಯಾರ್ಥಿಗಳು ಧರಿಸಿದ್ದ ಕೇಸರಿ ಶಲ್ಯಗಳನ್ನು ತೆಗೆಸಿ ಪಾಠ ಪ್ರವಚನಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!