ಹಿಜಾಬ್ v/s ಕೇಸರಿ ಶಾಲು: ಸೋಮವಾರ ಏನಾಯ್ತು, ಇಲ್ಲಿದೆ ರೌಂಡಪ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್ v/s ಕೇಸರಿ ಶಾಲು ವಿವಾದ ಈಗ ಇಡೀ ರಾಜ್ಯಕ್ಕೆ ವ್ಯಾಪಿಸುತ್ತಿದೆ. ರಾಜ್ಯ ಸರಕಾರ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸುವಂತೆ ಸುತ್ತೋಲೆ ಹೊರಡಿಸಿದ ನಂತರವೂ ಸೋಮವಾರ ವಿದ್ಯಾರ್ಥಿಗಳು ಹಿಜಾಬ್ ಮತ್ತು ಕೇಸರಿ ಶಾಲು ಹಾಗೂ ಹೊಸದಾಗಿ ನೀಲು ಶಾಲು ಧರಿಸಿ ಬಂದ ಘಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

ಹಿಜಾಬ್‌ಗೆ ಅವಕಾಶ ನೀಡುವಂತೆ ಪ್ರತಿಭಟನೆ
ಕುಂದಾಪುರದ ಜ್ಯೂನಿಯರ್ ಕಾಲೇಜಿನಲ್ಲಿ ಸೋಮವಾರವೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರು. ಕಾಲೇಜು ಆವರಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದವರಿಗೆ ಮಾನವೀಯತೆ ನೆಲೆಯಲ್ಲಿ ಕಾಲೇಜು ಆವರಣದೊಳಗೆ ಬರಲು ಅವಕಾಶ ನೀಡಲಾಯಿತು. ಅಲ್ಲದೇ ಸಮವಸ್ತ್ರದಲ್ಲಿ ಬರಲು ತಿಳಿಸಲಾಯಿತು. ಆದರೆ ವಿದ್ಯಾರ್ಥಿನಿಯರು ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಇನ್ನು ಕುಂದಾಪುರ ಕಾಗೇರಿಯ ಸ.ಪ.ದ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದರು. ವೆಂಕಟರಮಣ ಪಿಯು ಕಾಲೇಜಿನಲ್ಲಿ ಹಿಜಾಬ್‌ಗೆ ಪ್ರತಿರೋಧವಾಗಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿದರು. ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದವರನ್ನು ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಿಸಲಾಯಿತು. ಕುಂದಾಪುರ ತಾಲೂಕಿನ ಗಂಗೊಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿಯೂ ಹಿಜಾಬ್ ವಿವಾದ ವಿಸ್ತರಿಸಿದೆ.

ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು
ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜಿನಲ್ಲಿ ಹಿಜಾಬ್ ತೆಗೆಸಬಾರದು ಎಂದು ನೀಲಿ ಶಾಲು ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಜೈ ಭೀಮ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರೆ, ಅದನ್ನು ವಿರೋಧಿಸಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದರು. ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಬಳಿ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದರು.

ಶಿವಮೊಗ್ಗದಲ್ಲೂ ಹಿಜಾಬ್ ಸಂಘರ್ಷ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಬಂದರು. ಈ ವಿದ್ಯಾರ್ಥಿಗಳು ಕಾಲೇಜು ಗೇಟಿನ ಬಳಿ ಪ್ರಾಂಶುಪಾಲರು ತಡೆದರು. ಹಿಜಾಬ್ ಮತ್ತು ಕೇಸರಿ ಶಾಲು ಬಿಚ್ಚಿಟ್ಟವರಿಗೆ ಮಾತ್ರ ಕಾಲೇಜು ಆವರಣ ಪ್ರವೇಶಕ್ಕೆ ಅನುಮತಿ ನೀಡಲಾಯಿತು.

ವಿಜಯಪುರದಲ್ಲಿ ಕಾಲೇಜುಗಳಿಗೆ ರಜೆ
ವಿಜಯಪುರ ಜಿಲ್ಲೆಯಲ್ಲಿಯೂ ಹಿಜಾಬ್-ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದ ಎರಡು ಕಾಲೇಜು ಆಡಳಿತ ಮಂಡಳಿಗಳು ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಆಗಮಿಸುವಂತೆ ತಾಕೀತು ಮಾಡಿ, ಇಂದು ಕಾಲೇಜುಗಳಿಗೆ ರಜೆ ಘೋಷಿಸಿವೆ.

ಒಂದೇ ಕೊಠಡಿಯಲ್ಲಿ ಹಿಜಾಬ್-ಕೇಸರಿ ಶಾಲು
ಹಾಸನದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬಂದಿದ್ದು, ಉಪನ್ಯಾಸಕರು ತರಾಟೆಗೆ ತೆಗೆದುಕೊಂಡರು. ಇಲ್ಲಿನ ಸರಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತ ಘಟನೆಯೂ ನಡೆದಿದೆ.
ಕೊಡಗು, ಮಂಡ್ಯ, ಚಿಕ್ಕಬಳ್ಳಾಪುರ, ಹಾವೇರಿ, ಕೋಲಾರ ಮೊದಲಾದ ಜಿಲ್ಲೆಗಳಿಗೂ ಹಿಜಾಬ್ ವಿವಾದ ವಿಸ್ತರಿಸಿದೆ.

ಹಿಜಾಬ್ ವಿವಾದ ಹೈಕೋರ್ಟ್ ಮುಂದೆ ಇದ್ದು, ನಾಳೆ ವಿಚಾರಣೆ ನಡೆಯಲಿದೆ. ಸರಕಾರ ಹೊರಡಿಸಿದ ಸುತ್ತೋಲೆಯನ್ನು ವಿದ್ಯಾರ್ಥಿಗಳು ಧಿಕ್ಕರಿಸಿದ್ದಾರೆ. ಇನ್ನು ಹೈಕೋರ್ಟ್ ತೀರ್ಪು ಏನು ಬರಲಿದೆ ಎಂಬುದರ ಮೇಲೆ ಸದ್ಯ ಎಲ್ಲರ ಲಕ್ಷ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!