ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬಿಹಾರ ಮತ್ತು ಉತ್ತರ ಪ್ರದೇಶದಿಂದ ತಮಿಳುನಾಡಿಗೆ ಬರುವ ಹಿಂದಿ ಭಾಷಿಕರು ತಮ್ಮ ರಾಜ್ಯದಲ್ಲಿ ಕೂಲಿ ಕೆಲಸ ಹಾಗೂ ಶೌಚಾಲಯ ಮತ್ತು ರಸ್ತೆಗಳ ಸ್ವಚ್ಛತೆ ಕೆಲಸವನ್ನಷ್ಟೇ ಮಾಡುತ್ತಾರೆ ಎನ್ನುವ ಮೂಲಕ ಡಿಎಂಕೆ ಸಂಸದ ದಯಾನಿಧಿ ಮಾರನ್ ವೈಷಮ್ಯದ ಕಿಡಿ ಹಚ್ಚಿದ್ದಾರೆ.
ದಯಾನಿಧಿ ಮಾರನ್ ಅವರು ಮಾಡಿರುವ ಭಾಷಣದ ತುಣುಕೊಂದನ್ನು ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲಾ ಸಾಮಾಜಿಕ ತಾಣದ ಮೂಲಕ ಪ್ರಚುರಪಡಿಸಿದ್ದಾರೆ. ಅದರಲ್ಲಿ ಮಾರನ್ ಅವರು ಇಂಗ್ಲಿಷ್ ಕಲಿತವರು ಮತ್ತು ಹಿಂದಿ ಕಲಿಯುವವರ ನಡುವಿನ ವ್ಯತ್ಯಾಸದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಪ್ರಕಾರ ಇಂಗ್ಲಿಷ್ ಕಲಿತವರು ಮಾಹಿತಿ ತಂತ್ರಜ್ಞಾನ ಇತ್ಯಾದಿ ನೌಕರಿಗಳಿಗೆ ಹೋದರೆ, ಬಿಹಾರ ಮತ್ತು ಉತ್ತರ ಪ್ರದೇಶಗಳ ಹಿಂದಿ ಭಾಷಿಕರು ಕೆಳಹಂತದ ಕೆಲಸಗಳನ್ನು ಮಾಡಲು ಮಾತ್ರ ಶಕ್ತರು.
ದಯಾನಿಧಿ ಮಾರನ್ ಮಾತುಗಳನ್ನು ಖಂಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್, “ಇದು ಉತ್ತರ ಮತ್ತು ದಕ್ಷಿಣದ ಪ್ರಾಂತಗಳನ್ನು ವಿಭಜಿಸಿ ಆಳುವ ಕಾರ್ಯತಂತ್ರವಾಗಿದೆ. ಈ ಬಗ್ಗೆ ಇಂಡಿ ಮೈತ್ರಿಕೂಟದಲ್ಲಿರುವ ನಿತೀಶ್ ಕುಮಾರ್, ಅಖಿಲೇಶ್ ಯಾದವರ ಸಮಾಜವಾದಿ ಪಕ್ಷಗಳು ಏನು ಹೇಳುತ್ತವೆ” ಎಂದು ಪ್ರಶ್ನಿಸಿದ್ದಾರೆ.