ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲು 15 ದಿನಗಳ ಗಡುವು ಕೊಟ್ಟ ಹಿಂದು ಕಾರ್ಯಕರ್ತರು

ಹೊಸದಿಗಂತ ವರದಿ, ಮಡಿಕೇರಿ:

ಹಿಂದೂ ಸಾಮಾಜಿಕ ಕಾರ್ಯಕರ್ತರನ್ನು ರೌಡಿಶೀಟರ್ ಪಟ್ಟಿಯಿಂದ ತಕ್ಷಣ ಕೈಬಿಡಬೇಕೆಂದು ಕೊಡಗು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ಮಹೇಶ್ ಕಡಗದಾಳು, ಈ ಹಿಂದಿನ ಸರಕಾರದ ಅವಧಿಯಲ್ಲಿ ಕೊಡಗಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರನ್ನು ದುರುದ್ದೇಶಪೂರ್ವಕವಾಗಿ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಅದೇ ಕಾರಣವನ್ನಿಟ್ಟು ಪ್ರತಿ ವರ್ಷ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ಬೆದರಿಸುವುದು, ನೋಟೀಸ್ ನೀಡದೆ ಮನೆಗಳಿಗೆ ನುಗ್ಗಿ ತೊಂದರೆ ನೀಡುವುದು, ಮುಚ್ಚಳಿಕೆ ಬಾಂಡ್ ಬರೆದು ಕೊಡುವಂತೆ ಒತ್ತಡ ಹಾಕುವ ಪ್ರಕ್ರಿಯೆ ಈಗಲೂ ಮುಂದುವರೆದಿದೆ ಎಂದು ಆರೋಪಿಸಿದರು.
ಅಪರಾಧ ಕೃತ್ಯಗಳನ್ನು ನಡೆಸುವವರ ಬಗ್ಗೆ ಮೃದು ಧೋರಣೆ ಹೊಂದಿರುವ ಪೊಲೀಸರು, ಹಿಂದೂಗಳ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಖಂಡನೀಯ. ಹಿಂದೂ ಕಾರ್ಯಕರ್ತರ ಮೇಲಿನ ರೌಡಿಶೀಟರ್ ಪಟ್ಟಿಯನ್ನು ಸರಕಾರ ತಕ್ಷಣ ಕೈಬಿಡಬೇಕು. ಈ ವಿಚಾರದಲ್ಲಿ ಮೀನಾ ಮೇಷ ಎಣಿಸುವುದು ಸರಿಯಲ್ಲವೆಂದರು.
ವೇದಿಕೆಯ ಜಿಲ್ಲಾ ಸಂಯೋಜಕ ಅಜಿತ್ ಕುಕ್ಕೇರ ಮಾತನಾಡಿ, ಪೊಲೀಸ್ ಇಲಾಖೆಯಿಂದ ಹಿಂದೂ ಸಾಮಾಜಿಕ ಕಾರ್ಯಕರ್ತರ ಚಳುವಳಿಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಯಾವುದೇ ಕೇಸ್‍ಗಳಿಲ್ಲದ ಎಲ್ಲಾ ಹಿಂದೂ ಕಾರ್ಯಕರ್ತರ ಮೇಲಿನ ರೌಡಿಶೀಟರ್ ಪಟ್ಟಿಯನ್ನು ಮುಂದಿನ 15 ದಿನಗಳೊಳಗೆ ಹಿಂಪಡೆಯಬೇಕು. ತಪ್ಪಿದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲಾ ಷಡ್ಯಂತ್ರಗಳ ಹಿಂದೆ ಕಾಣದ ಕೈಗಳಂತಿರುವ ರಾಜಕಾರಣಗಳ ವಿರುದ್ಧವೂ ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕ ವಿನಯ್ ಮಡಿಕೇರಿ, ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯರಾದ ಶಾಂತೆಯಂಡ ತಿಮ್ಮಯ್ಯ, ಸುನಿಲ್ ಮಾದಾಪುರ ಹಾಗೂ ಕಮಲ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!