ಹಿಂದುತ್ವವಾದಿ ಸಾವರ್ಕರ್‌ಗೆ ಕಾಂಗ್ರೆಸ್‌ನಿಂದ ದೇಶದ್ರೋಹಿ ಪಟ್ಟ: ಬಿಜೆಪಿ ಕಿಡಿ

ಹೊಸದಿಗಂತ ವರದಿ, ಮಂಡ್ಯ:
ಸಾವರ್ಕರ್‌ರಂತಹ ಮಹಾನ್ ದೇಶಭಕ್ತನನ್ನು ಸ್ವಾತಂತ್ರ್ಯೊತ್ತರ ಭಾರತದಲ್ಲಿ ಹಿಂದುತ್ವವಾದಿ ಎನ್ನುವ ಕಾರಣಕ್ಕೆ ದೇಶದ್ರೋಹಿ ಪಟ್ಟ ಕಟ್ಟಲು ಹೊರಟಿರುವ ಕಾಂಗ್ರೆಸ್ಸಿಗರ ಧೋರಣೆಯನ್ನು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ತೀವ್ರವಾಗಿ ಖಂಡಿಸಿದ್ದಾರೆ.
ಅವಕಾಶ ಸಿಕ್ಕಾಗಲೆಲ್ಲಾ ಸಾವರ್ಕರ್‌ರನ್ನು ಕಾಂಗ್ರೆಸ್ ಅವಮಾನಿಸಿಕೊಂಡು ಬಂದಿದೆ. ಸಾವರ್ಕರರು ಬದುಕಿದ್ದಾಗ ಅವರನ್ನು ಅಂದಿನ ಪ್ರಧಾನಿ ನೆಹರು ಅವರು ಗಾಂಧಿಜೀಯವರ ಕೊಲೆಯ ಆಪಾದನೆಯನ್ನು ಹೊರೆಸಿ, ಜೈಲಿಗೆ ತಳ್ಳುವ ಮೂಲಕ ರಾಜಕೀಯ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲಿ ಯಶಸ್ಸು ಪಡೆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ಸಿಗರು ಇದೇ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಲ್ಲದೆ, ಇನ್ನೂ ಮುಂದುವರಿಸುತ್ತಲೇ ಇದ್ದಾರೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಎಡಪಂಥೀಯ ಮನಸ್ಥಿತಿಯ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಅಂಡಮಾನಿನ ಜೈಲಿನಲ್ಲಿನಲ್ಲಿ ಸಾವರ್ಕರ್ ವಿಚಾರ ಹೊಂದಿದ ಲಕವನ್ನು ಎಸೆದು ಅಪಮಾನಿಸಿದ್ದರು. ನಂತರ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದಾಗ ಸಾವರ್ಕರರ ಭಾವಚಿತ್ರವನ್ನು ಸಂಸತ್ತಿನಲ್ಲಿ ಅನಾವರಣಗೊಳಿಸುವುದನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿ ಈ ಕಾರ್ಯಕ್ರಮವನ್ನು ಭಹಿಷ್ಕರಿಸಿದ್ದರು. ಜೊತೆಗೆ ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರಿಗೆ, ಸಾವಾರ್ಕರವರ ಭಾವಚಿತ್ರದ ಅನಾವರಣ ಮಾಡದಂತೆ ಪತ್ರ ಬರೆದಿದ್ದರು ಎಂದು ತಿಳಿಸಿದ್ದಾರೆ.
ಇವೆಲ್ಲ ಕಾಂಗ್ರೆಸ್ಸಿನ ದ್ವೇಷದ ಸಿದ್ಧಾಂತದ ಭಾಗವೇ ಆಗಿದ್ದುಘಿ, ಇತ್ತೀಚೆಗೆ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿಯವರೂ ಕೂಡ ಸಂಸತ್ತಿನಲ್ಲಿ ನಮ್ಮವರು ಮಹಾತ್ಮ ಗಾಂಧಿಯ ಕಡೆಯವರು, ನೀವೆಲ್ಲ ಸಾವರ್ಕರ್ ಕಡೆಯವರು ಎಂದು ಬಿಜೆಪಿಯನ್ನು ಅಣಕಿಸುವ ಮೂಲಕ ತನ್ನಲ್ಲಿರುವ ದ್ವೇಷದ ಮನಸ್ಥಿತಿಯನ್ನು ಮುಂದುವರಿದ್ದಾರೆ ಎಂದು ದೂರಿದ್ದಾರೆ.
ಇಂಗ್ಲೆಂಡ್‌ನಲ್ಲಿ ವೀರ ಸಾವರ್ಕರ್ ಹುಟ್ಟುಹಬ್ಬ ಆಚರಣೆ ಸಂಬಂಧ 1980ರ ಮೇ.ನಲ್ಲಿ ಪತ್ರ ಬರೆದು ಜಯಂತಿಗೆ ಆಹ್ವಾನಿಸುವ ವೇಳೆ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಆಯೋಜಕರಿಗೆ ಬರೆದ ಪತ್ರದಲ್ಲಿ ವೀರಸಾವರ್ಕರ್ ಭಾರತದ ವೀರಪುತ್ರ, ಅಪ್ರತಿಮ ದೇಶಭಕ್ತ ಎಂದು ಹೊಗಳಿ ಪತ್ರ ಬರೆದಿರುವುದು ಕಾಂಗ್ರೆಸ್ಸಿಗರಿಗೆ ಅರಿವಿಲ್ಲವೇ. ಸಾವರ್ಕರ್‌ನ್ನು ಟೀಕಿಸುವವರು ಇಂದಿರಾಗಾಂಧಿಯವರನ್ನೇ ಟೀಕಿಸುತ್ತಿದ್ದೇವೆ ಎಂಬುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!