ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಈ ಬಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಕಳೆದ 15 ವರ್ಷಗಳಿಂದ ರಾಜ್ಯವನ್ನಾಳುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಿರುವ ಬಿಜೆಪಿ, ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ, ಈ ವಿಜಯೋತ್ಸವದ ನಡುವೆಯೇ ರಾಜ್ಯದ ವಿವಿಧೆಡೆ ಹಿಂಸಾಚಾರದ ಕಾರ್ಮೋಡ ಕವಿದಿದೆ.
ಘೋಷಿತ ಫಲಿತಾಂಶದ ಪ್ರಕಾರ, ಬಿಜೆಪಿ 206 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇನ್ನೊಂದೆಡೆ, ಆಡಳಿತಾರೂಢ ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತಗೊಳ್ಳುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಲ್ಲಿ ಸೋಲನ್ನಪ್ಪಿರುವುದು ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಸಂಘರ್ಷ ಆರಂಭವಾಗಿದೆ.
ಹುಗ್ಲಿ ಮತ್ತು ಬಿರ್ಭುಮ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಘರ್ಷಣೆಯಲ್ಲಿ ಈವರೆಗೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೋಲ್ಕತ್ತಾದ ಹಲವು ವಾರ್ಡ್‌ಗಳಲ್ಲಿ ಉಭಯ ಪಕ್ಷಗಳ ನಡುವೆ ಮುಖಾಮುಖಿ ಸಂಘರ್ಷ ನಡೆದಿದ್ದು, ಕಚೇರಿಗಳ ಮೇಲೆ ದಾಳಿ ನಡೆದಿವೆ. ಹೂಗ್ಲಿ ಮತ್ತು ಆಂಚೋಲ್ ಪ್ರದೇಶಗಳಲ್ಲಿ ಟಿಎಂಸಿ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಚುನಾವಣಾ ಆಯೋಗ ಮತ್ತು ರಾಜ್ಯ ಪೊಲೀಸ್ ಇಲಾಖೆ ಇಡೀ ರಾಜ್ಯಾದ್ಯಂತ ‘ಹೈ ಅಲರ್ಟ್’ ಘೋಷಿಸಿವೆ.
ಕೇಂದ್ರ ಚುನಾವಣಾ ಆಯೋಗವು ಹಿಂಸಾಚಾರದಲ್ಲಿ ತೊಡಗಿರುವವರನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಬಿಜೆಪಿ ನಾಯಕತ್ವವು ತನ್ನ ಕಾರ್ಯಕರ್ತರಿಗೆ ಮನವಿ ಮಾಡಿದೆ. ದಶಕಗಳ ಕಾಲದ ಟಿಎಂಸಿ ಆಡಳಿತ ಅಂತ್ಯಗೊಂಡು ಬಿಜೆಪಿ ಅಧಿಕಾರ ಸ್ವೀಕರಿಸುವ ಮುನ್ನವೇ ಈ ರೀತಿಯ ರಾಜಕೀಯ ಸಂಘರ್ಷ ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.



