ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಬಣ್ಣದ ಧ್ವಜವನ್ನು ಪ್ರತಿಭಟನೆಯ ರೂಪವಾಗಿ ಪ್ರದರ್ಶಿಸಿದರೂ ಅಂತಹ ಕೃತ್ಯವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಹೀಗಾಗಿ, ಅದನ್ನು ಮಾನನಷ್ಟ ಅಥವಾ ಕಾನೂನುಬಾಹಿರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನಕ್ಕೆ ಕಪ್ಪು ಬಾವುಟ ತೋರಿಸಿದ್ದವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಅರ್ಜಿದಾರರು 2017ರ ಏಪ್ರಿಲ್ 9ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಗೆ ಯುವಕರು ಕಪ್ಪು ಬಾವುಟ ಬೀಸಿದ್ದರು ಮತ್ತು ಪೊಲೀಸ್ ಸಿಬ್ಬಂದಿ ವಿರುದ್ಧ ಬಲಪ್ರಯೋಗ ಮಾಡಿದರು ಎಂದು ಆರೋಪಿಸಲಾಗಿತ್ತು.
ಇದರ ವಿಚಾರಣೆ ನಡೆಸಿದ ಕೋರ್ಟ್, ವ್ಯಕ್ತಿಯೊಬ್ಬರಿಗೆ ಕಪ್ಪು ಬಾವುಟ ತೋರಿಸುವುದು ಕಾನೂನು ಬಾಹಿರವಲ್ಲ ಮತ್ತು ಮಾನನಷ್ಟವಾಗುವುದಿಲ್ಲ ಎಂದು ಗಮನಿಸಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ಬೀಸಿದ್ದಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.
ಪೊಲೀಸರು 2020ರಲ್ಲಿ ಪರವೂರಿನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅವರ ವಿರುದ್ಧ ಮಾನನಷ್ಟ, ಸಾರ್ವಜನಿಕ ನೌಕರನಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಆರೋಪಿಗಳು ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.