ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಏಳು ಮಂದಿಗೆ ಗೌರವ!

ಹೊಸದಿಗಂತ ವರದಿ, ಮಡಿಕೇರಿ:

ಹಾವೇರಿಯಲ್ಲಿ ಜ.6ರಿಂದ ನಡೆಯಲಿರುವ 86ನೇ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ, ನಿವೃತ್ತ ಏರ್ ಮಾರ್ಷಲ್ ಕೆ.ಸಿ‌.ಕಾರ್ಯಪ್ಪ ಅವರು ಸನ್ಮಾನಕ್ಕೊಳಗಾಗಲಿದ್ದು,ಇದರೊಂದಿಗೆ ಆರು ಮಂದಿ ಸಾಹಿತಿಗಳಿಗೆ ಕವನ ವಾಚನ, ವಿಷಯ ಮಂಡನೆಗೆ ಅವಕಾಶ ಲಭಿಸಿದೆ.

ಈ ಬಾರಿ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯ ಏಳು ಜನರಿಗೆ ಅವಕಾಶ ದೊರೆತಿದ್ದು ಇದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಜ.6ರ ಸಂಜೆ 6 ಗಂಟೆಗೆ ನಡೆಯಲಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರಿಗೆ ರಕ್ಷಣಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಸನ್ಮಾನ ನಡೆಯಲಿದ್ದು, ಇದು ಕೊಡಗು ಜಿಲ್ಲೆಗೆ ಮತ್ತು ಕೊಡಗಿನ ರಕ್ಷಣಾ ಕ್ಷೇತ್ರದ ಸೇವೆಗೆ ನೀಡಿದ ಗೌರವವಾಗಿದೆ.ಜ.8ರ ಮಧ್ಯಾಹ್ನ 3ಗೆ ನಡೆಯಲಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ಸಾಹಿತ್ಯ ಸಂಘಟಕ ಟಿ.ಪಿ ರಮೇಶ್ ಅವರನ್ನು ಸನ್ಮಾನಿಸಲಾಗುತ್ತಿದೆ.

ಜ.6ರ ಸಂಜೆ 4 ಗಂಟೆಗೆ ಜರಗುವ ಕವಿಗೋಷ್ಠಿಯಲ್ಲಿ ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ ಜಯಪ್ರಕಾಶ್ ಅವರು ಕವನ ವಾಚನ ಮಾಡಲಿದ್ದು, 7ರಂದು ಅಪರಾಹ್ನ 3 ಗಂಟೆಗೆ ನಡೆಯುವ “ಶಿಕ್ಷಣದಲ್ಲಿ ಕನ್ನಡ ಅಸ್ಮಿತೆ” ಎಂಬ ವಿಚಾರ ಗೋಷ್ಠಿಯಲ್ಲಿ ಕೊಡಗಿನವರಾದ, ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ

ಡಾ ಮಾಧವ ಪೆರಾಜೆ ( ಇವರು ದಿ. ಕೇಶವ ಪೆರಾಜೆ ಅವರ ಸಹೋದರರು) ಅವರು ಆಶಯ ಭಾಷಣ ಮಾಡಲಿದ್ದಾರೆ.
ಅದೇ ದಿನ ಕರ್ನಾಟಕ ಭಾಷಾ ವೈವಿಧ್ಯ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಕೊಡವ ಭಾಷಾ ವೈವಿಧ್ಯ ಕುರಿತು ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ಕಾವೇರಿ ಎನ್. ಎ ಉಪನ್ಯಾಸ ನೀಡಲಿದ್ದಾರೆ. ಅದೇ ವೇದಿಕೆಯಲ್ಲಿ ಅರೆ ಭಾಷೆ ವೈವಿಧ್ಯತೆಯ ಕುರಿತು ಜಿಲ್ಲೆಯ ಸಾಹಿತಿ ಸ್ಮಿತಾ ಅಮೃತರಾಜ್ ಉಪನ್ಯಾಸ ನೀಡಲಿದ್ದಾರೆ.

ಜ.8ರಂದು ವರ್ತಮಾನದಲ್ಲಿ ಮಹಿಳೆ ಗೋಷ್ಠಿಯಲ್ಲಿ ಔದ್ಯೋಗಿಕ ಮಹಿಳೆಯರ ಸಾಧನೆಗಳು ಎಂಬ ವಿಚಾರದ ಕುರಿತು ಜಿಲ್ಲೆಯ ಉದ್ಯಮಿ, ಜೇನು ಕೃಷಿ ಮತ್ತು ಮಾರುಕಟ್ಟೆಯಲ್ಲಿ ಅಪ್ರತಿಮ ಸಾಧನೆ ಸಾಧಿಸಿದ ಛಾಯಾ ನಂಜಪ್ಪ ವಿಷಯ ಮಂಡನೆ ಮಾಡಲಿದ್ದು, ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ ರಾಜೇಶ್ ಪದ್ಮನಾಭ ಅವರು ವಿವಿಧ ಜವಾಬ್ದಾರಿಗಳನ್ನು ಸಮ್ಮೇಳನದಲ್ಲಿ ನಿರ್ವಹಿಸಲಿದ್ದಾರೆ.

ಜಿಲ್ಲೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನೂರಕ್ಕೂ ಅಧಿಕ ಸದಸ್ಯರು ಮತ್ತು ಕನ್ನಡ ಅಭಿಮಾನಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಪತ್ರಿಕಾ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!