Friday, February 3, 2023

Latest Posts

ಗೋಣಿಕೊಪ್ಪದಲ್ಲಿ ಒಂದು ತಿಂಗಳವರೆಗೆ ದ್ವಿಮುಖ ವಾಹನ ಸಂಚಾರಕ್ಕೆ ಅನುವು: ಬೋಪಯ್ಯ

ಹೊಸದಿಗಂತ ವರದಿ, ಗೋಣಿಕೊಪ್ಪ:

ಏಕಮುಖ ವಾಹನ ಸಂಚಾರ ನಿಯಮನ್ನು ಸಡಿಲಗೊಳಿಸಿ ಒಂದು ತಿಂಗಳವರೆಗೆ ಪ್ರಾಯೋಗಿಕವಾಗಿ ದ್ವಿಮುಖ ಸಂಚಾರವನ್ನು ಮುಂದುವರಿಸಲಾಗುವುದು. ನಂತರದ ಬೆಳೆವಣಿಗೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿರುವುದಾಗಿ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಗೋಣಿಕೊಪ್ಪ ಪಟ್ಟಣದ ಬೈಪಾಸ್‍ನಲ್ಲಿ 55 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರೀಟ್ ಹಾಗೂ ಡಾಮರೀಕರಣಗೊಂಡ ರಸ್ತೆಯನ್ನು ಸೋಮವಾರ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಟ್ಟು ಅವರು ಮಾತನಾಡಿದರು.

ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಈ ಹಿಂದೆ ಏಕಮುಖ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈ ನಿಯಮವನ್ನು ರದ್ದುಗೊಳಿಸುವಂತೆ ವರ್ತಕರು ಬೇಡಿಕೆ ಸಲ್ಲಿಸುತ್ತಿರುವುದರಿಂದ ಏಕಮುಖ ಸಂಚಾರ ನಿಯಮವನ್ನು ಸಡಿಲಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಒಂದು ತಿಂಗಳ ಅವಧಿಗೆ ಈ ಪ್ರಯೋಗವನ್ನು ನಡೆಸಲಾಗುವುದು ಎಂದು ಹೇಳಿದರು.

ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ 91.25 ಲಕ್ಷ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯಲಿದೆ. ಅದರಂತೆ 55 ಲಕ್ಷದಲ್ಲಿ ಬೈಪಾಸ್ ರಸ್ತೆ ಅಭಿವೃದ್ದಿಗೊಂಡಿದೆ. 8 ಲಕ್ಷದಲ್ಲಿ ಜ್ಯೂಸ್ ಫ್ಯಾಕ್ಟರಿ ರಸ್ತೆ, 6.25 ಲಕ್ಷದಲ್ಲಿ ಸೆಂಟ್ ಥೋಮಸ್ ಶಾಲೆ ರಸ್ತೆ, 4.75 ಲಕ್ಷದಲ್ಲಿ ಪೋಸ್ಟ್ ಆಫೀಸ್ ರಸ್ತೆ, 5 ಲಕ್ಷದಲ್ಲಿ ಮಾರುಕಟ್ಟೆ ಸಮೀಪದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, 3.75 ಲಕ್ಷದಲ್ಲಿ ಆಸ್ಪತ್ರೆ ಹಿಂಭಾಗದ ರಸ್ತೆ, 4 ಲಕ್ಷದಲ್ಲಿ ಉಮಾಮಹೇಶ್ವರಿ ದೇವಸ್ಥಾನ ಮುಂಭಾಗದ ರಸ್ತೆ, 3 ಲಕ್ಷ ಅನುದಾನದಲ್ಲಿ ಆಟೋ ಮಾಲಕರ ಹಾಗೂ ಚಾಲಕರ ಸಂಘದ ಕಟ್ಟಡ ಮೇಲ್ಛಾವಣಿ ನಿರ್ಮಾಣ ಮತ್ತು 1.50 ಲಕ್ಷದಲ್ಲಿ ಒಂದನೇ ವಿಭಾಗದ ರಸ್ತೆ ಅಭಿವೃದ್ದಿ ಕಾಮಗಾರಿಗಳು ನೆರವೇರಲಿವೆ ಎಂದು ಬೋಪಯ್ಯ ಮಾಹಿತಿ ನೀಡಿದರು.

ಈಗಾಗಲೇ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಂಡು ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ, ಕಲ್ಲುಕ್ವಾರಿ ಮಾಲಕರ ಪ್ರತಿಭಟನೆಯಿಂದ ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ಮುಂದಿನ ಎರಡು ತಿಂಗಳ ಅವಧಿಯೊಳಗೆ ಕ್ಷೇತ್ರದ ರಸ್ತೆ ಹಾಗೂ ಇನ್ನಿತರ ಸೌಕರ್ಯದ ಅಭಿವೃದ್ಧಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಜಿ.ಪಂ. ಸಾಮಾಜಿಕ ನ್ಯಾಯಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ಸದಸ್ಯರಾದ ಚೈತ್ರಾ ಬಿ. ಚೇತನ್, ಬಿ.ಎನ್. ಪ್ರಕಾಶ್, ನೂರೇರ ರತಿ ಅಚ್ಚಪ್ಪ, ಪುಷ್ಪಾ ಮನೋಜ್, ರಾಮಕೃಷ್ಣ ಭಟ್, ಕೊಣಿಯಂಡ ಬೋಜಮ್ಮ, ಶರತ್ ಕಾಂತ್, ವಿವೇಕ್ ರಾಯ್ಕರ್, ಹಕೀಮ್, ರಾಮ್‍ದಾಸ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ಗೋಣಿಕೊಪ್ಪ ನಗರ ಶಕ್ತಿ ಕೇಂದ್ರ ಪ್ರಮುಖ್ ಸುರೇಶ್‍ ರೈ, ನೂರೇರ ರಂಜಿ, ಆರಾಧನಾ ಸಮಿತಿ ಜಿಲ್ಲಾ ಸದಸ್ಯ ಜಯ ಪೂವಯ್ಯ, ಮಾತೃಶಕ್ತಿ ತಾಲೂಕು ಸಂಚಾಲಕಿ ಧನಲಕ್ಷ್ಮಿ, ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಸಹಾಯಕ ಕಾರ್ಯದರ್ಶಿ ನರಸಿಂಹ, ಗುತ್ತಿಗೆದಾರರಾದ ಟಿ.ಪಿ. ಪ್ರವೀಣ್, ಕೆ.ಯು. ತಿಮ್ಮಯ್ಯ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!