ಹೊಸದಿಗಂತ ವರದಿ ಚಿತ್ರದುರ್ಗ:
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೆ. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದನ್ನು ಮೊಟಕುಗೊಳಿಸಿತು. ಆದರೆ ಮೀಸಲಾತಿ ಕಡಿತ ಮಾಡಿದವರಿಗೆ ಸನ್ಮಾನ ಮಾಡಲಾಗುತ್ತಿದೆ. ಇದೊಂದು ವಿಪರ್ಯಾಸದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಒಳ ಮೀಸಲಾತಿ ಕಗ್ಗಂಟು ಬಿಡಿಸಿದ ನರೇಂದ್ರ ಮೋದಿಯವರ 25 ವರ್ಷಗಳ ಆಡಳಿತ ಸೇವಾ ಸಂಕಲ್ಪ ಅಭಿಯಾನ ಆಯೋಜನಾ ಸಮಿತಿ ವತಿಯಿಂದ ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾದಿಗ ಕಾರ್ಯಕರ್ತರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವೇ ಸಮುದಾಯಗಳು ಎಸ್ಟಿ ಪಟ್ಟಿಯಲ್ಲಿದ್ದವು. ಇದಕ್ಕೆ ನಾನಾ ಜಾತಿಗಳನ್ನು ಸೇರಿಸಿ ಮೀಸಲಾತಿ ಕೊರತೆ ಉಂಟು ಮಾಡಿದ್ದು ಕಾಂಗ್ರೆಸ್ ಪಕ್ಷ. ಶೋಷಿತ ಸಮುದಾಯಗಳಿಗೆ ನೆರವು ನೀಡುವ ಉದ್ದೇಶದಿಂದ ನಾವು ಮೀಸಲಾತಿ ಹೆಚ್ಚಳ ಮಾಡಿದೆವು. ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯುಗಳನ್ನು ಎಸ್ಸಿ ಪಟ್ಟಿಯಿಂದ ತೆಗೆಯಬಾರದು ಎಂದು ಹೇಳಿದ್ದೆವು. ಆದರೆ ಕಾಂಗ್ರೆಸ್ ಪಕ್ಷ ಮೀಸಲಾತಿ ಕಡಿತ ಮಾಡಿದ್ದೂ ಅಲ್ಲದೇ ಒಳಮೀಸಲಾತಿಯಲ್ಲೂ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾವು ಜನರ ಬದುಕಿಗಾಗಿ ರಾಜಕಾರಣ ಮಾಡುವುದಾಗಿ ಹೇಳಿದ್ದಾರೆ. ಅವರು ಬದುಕಿನ ರಾಜಕಾರಣ ಮಾಡುವುದಾದಲ್ಲಿ ನಾವು ಹೆಚ್ಚಳ ಮಾಡಿದ್ದ ಮೀಸಲಾತಿ ಪ್ರಮಾಣ ಅನುಷ್ಠಾನ ಮಾಡಲಿ. ಒಳಮೀಸಲಾತಿ ಅನ್ಯಾಯ ಸರಿಪಡಿಸಿ ಜಾರಿ ಮಾಡಲಿ. ಆ ಮೂಲಕ ತಮ್ಮ ದಲಿತ ಪರ, ಶೋಷಿತರ ಪರ ಕಾಳಜಿಯನ್ನು ತೊರಿಸಲಿ ಎಂದು ಸವಾಲು ಹಾಕಿದರು.
ಮಾದಾರ ಗುರುಪೀಠದ ಡಾ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕೊಡುಗೆ ಅಪಾರ. ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಒಳಮೀಸಲಾತಿ ಜಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಐತಿಹಾಸಿಕ ಕೊಡುಗೆ ನೀಡಿವೆ. ಒಳಮೀಸಲಾತಿಗೆ ಹೆಚ್ಚಿನ ಶ್ರಮ ಮತ್ತು ಅನುದಾನ ನೀಡಿದ ಮೊದಲ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಷಿತ ಸಮುದಾಯಗಳಿಗೆ ಬರೋಬ್ಬರಿ 100 ಕೋಟಿ ರೂ.ಗಳ ಅನುದಾನದ ಆದೇಶ ಹೊರಡಿಸುವ ಮೂಲಕ ಮಠ-ಮಾನ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೆ, ಸ್ವಂತ ಜಮೀನು ಹಾಗೂ ಸ್ಮಶಾನಕ್ಕೂ ಜಾಗವಿಲ್ಲದೆ ಹೋರಾಟ ಮಾಡುತ್ತಿದ್ದ ಸಮುದಾಯಕ್ಕೆ ಬೃಹತ್ ಮಠ ನಿರ್ಮಾಣ ಮಾಡಲು 83 ಎಕರೆ ಜಮೀನನ್ನು ಮಂಜೂರು ಮಾಡಿ ಭೂಮಿಪೂಜೆಗೆ ಸಂಕಲ್ಪ ಮಾಡಿದ್ದು ಬಸವರಾಜ ಬೊಮ್ಮಾಯಿ. ಶೆಡ್ಗಳಲ್ಲಿದ್ದ ಸ್ವಾಮೀಜಿಗಳನ್ನು ಆರ್ಸಿಸಿ ಕಟ್ಟಡಗಳಿಗೆ ತಂದವರು ಬಿ.ಎಸ್.ಯಡಿಯೂರಪ್ಪ ಎಂದರು.
ಇದನ್ನೂ ಓದಿ:
ಸಂಸದ ಗೋವಿಂದ ಎಂ. ಕಾರಜೋಳ, ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು. ಮತ್ತೋರ್ವ ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಎಸ್.ಕೆ.ಬಸವರಾಜನ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಸಾಮರಸ್ಯ ಸಂಚಾಲಕರಾದ ವಾದಿರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಹನುಮಂತೇಗೌಡ, ಅನಿತ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಜಿ.ಎಚ್.ಮೋಹನ್ ಸ್ವಾಗತಿಸಿದರು. ಪರಶುರಾಮ್ ವಂದಿಸಿದರು.



