ಹೊಸದಿಗಂತ ವರದಿ, ಅಂಕೋಲಾ:
ಕಂಟೇನರ್ ಲಾರಿ ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ತಾಲೂಕಿನ ದುಗ್ಗನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ಗೂಡ್ಸ್ ರಿಕ್ಷಾ ಚಾಲಕ ಮುಂಡಗೋಡ ಪಾಳಾ ನಿವಾಸಿ ಕಿರಣ ಚಂದ್ರಶೇಖರ ಕೆಳಗಿನಮನೆ(23) ಮೃತ ದುರ್ದೈವಿಯಾಗಿದ್ದು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಅಂಕೋಲಾ ಕಡೆಯಿಂದ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡಿ ತಪ್ಪು ಬದಿಯಲ್ಲಿ ಬಂದ ಕಂಟೇನರ್ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗೂಡ್ಸ್ ಚಾಲಕ ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿದ್ದು ಲಾರಿ ಚಾಲಕ ಉತ್ತರ ಪ್ರದೇಶದ ಆಗ್ರಾ ನಿವಾಸಿ ಮೇಘ ಸಿಂಗ್ ಎನ್ನುವವರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಕೋಲಾ ಸಿ.ಪಿ.ಐ ಸಂತೋಷ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.