September 24, 2026
Thursday, September 24, 2026
spot_img

ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು-ಬಸ್‌ ಡಿಕ್ಕಿ, ಮೂವರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಪೆರಂಬಲೂರು ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿ-38ರಲ್ಲಿ ತುರೈಮಂಗಲಂ ಬಳಿ ಈ ದುರ್ಘಟನೆ ಸಂಭವಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ರಾಮನಾಥಪುರಂ ಜಿಲ್ಲೆಯ ಓರಿವಯಲ್ ಗ್ರಾಮದ ಕಾರ್ತಿ ಅವರು ಸಹೋದರನ ವಿವಾಹಕ್ಕಾಗಿ ಪತ್ನಿ ಸೂರ್ಯಾ ಹಾಗೂ ಸ್ನೇಹಿತರೊಂದಿಗೆ ಸ್ವಗ್ರಾಮಕ್ಕೆ ತೆರಳಿದ್ದರು. ವಿವಾಹ ಮುಗಿದ ಬಳಿಕ ಎಲ್ಲರೂ ಕಾರಿನಲ್ಲಿ ಚೆನ್ನೈಗೆ ಮರಳುತ್ತಿದ್ದರು. ಈ ವೇಳೆ ವೇಗವಾಗಿ ಸಾಗುತ್ತಿದ್ದ ಕಾರು ಮುಂದೆ ತೆರಳುತ್ತಿದ್ದ ಖಾಸಗಿ ಆಮ್ನಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ಕಾಜಾ ಅಲಿಯಾಸ್ ಕಾಳೀಶ್ವರನ್ ಹಾಗೂ ಪ್ರಭಾಕರನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿ ಅವರನ್ನು ಪೆರಂಬಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೆರಂಬಲೂರು ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ತಿ ಅವರ ಪತ್ನಿ ಸೂರ್ಯಾ, ಚಾಲಕ ಕಣ್ಣದಾಸನ್, ಜಾನ್ ಕೆನಡಿ ಹಾಗೂ ಸರಣ್ಯಾ ಗಾಯಗೊಂಡಿದ್ದು, ಸೂರ್ಯಾ ಅವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಿರುಚ್ಚಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದು, ಆಮ್ನಿ ಬಸ್ ಚಾಲಕ ರಾಜಶೀಲನ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

Must Read