October 15, 2026
Thursday, October 15, 2026
spot_img

ಸಿಸಿಟಿವಿಯಲ್ಲಿ ಸೆರೆಸಿಕ್ಕಿತು ಕಾಸರಗೋಡು ಅಪಘಾತದ ಭೀಕರ ದೃಶ್ಯ: ಬೆಚ್ಚಿಬೀಳಿಸುತ್ತಿದೆ ಜಾಲತಾಣದಲ್ಲಿನ ವೈರಲ್ ವಿಡಿಯೊ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕಾಸರಗೋಡು ಜಿಲ್ಲೆಯ ಕರಂದಕ್ಕಾಡ್ ಜಂಕ್ಷನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಅಪಘಾತದ ಭೀಕರತೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.


ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿತ್ತಾದರೂ ಸಿಸಿ ಟಿವಿ ದೃಶ್ಯಾವಳಿ ಹೊರಬಿದ್ದ ಬಳಿಕ ಘಟನೆಯ ತೀವ್ರತೆ ಅರಿವಿಗೆ ಬಂದಿದೆ. ಇಲ್ಲಿ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಹಲವು ಬಾರಿ ಪಲ್ಟಿಯಾಗಿ ಬರೋಬ್ಬರಿ ಸುಮಾರು 300 ಮೀಟರ್‌ಗಳಷ್ಟು ದೂರ ಉರುಳಿದೆ. ಸಮಯಕ್ಕೆ ಏರ್‌ಬ್ಯಾಗ್‌ಗಳು ತೆರೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರು ಕಡೆಯಿಂದ ಕರಂದಕ್ಕಾಡ್ ಜಂಕ್ಷನ್ ಕಡೆಗೆ ಬರುತ್ತಿದ್ದ ಈ ಇನ್ನೋವಾ ಕಾರು, ಮಧೂರು ಭಾಗದಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಹಠಾತ್ ವಾಹನವನ್ನು ತಿರುಗಿಸಲು ಯತ್ನಿಸಿದ್ದಾನೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಹಲವು ಬಾರಿ ಪಲ್ಟಿಯಾಗಿ ದೂರದವರೆಗೆ ಉರುಳಿದೆ. ಘಟನೆಯ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೇಗವಾಗಿ ಸಾಗುತ್ತಿದ್ದ ಕಾರು ಕ್ಷಣಾರ್ಧದಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗುವ ದೃಶ್ಯಗಳು ಅಪಘಾತದ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

Must Read