POSITIVE STORY| ನಿರೀಕ್ಷೆಗಿಂತ ಹೆಚ್ಚು ಆದಾಯ ನೀಡಿದ ತೋಟಗಾರಿಕೆ ಬೆಳೆಗಳು

– ಸಿ.ಎಸ್.ಅರಸನಾಳ

ಮುಂಡರಗಿ: ಕೃಷಿಯಲ್ಲಿ ಸಾಧನೆ ಮಾಡಬೇಕು ಎನ್ನುವ ನಿಷ್ಠೆ, ಪ್ರಾಮಣಿಕತೆ ಹಾಗೂ ಶ್ರಮ ಇದ್ದರೆ ಬಂಗಾರದ ಬೆಳೆ ಬೆಳೆಯಲು ಸಾಧ್ಯ ಎನ್ನುವುದಕ್ಕೆ ಹೆಸರೂರು ಗ್ರಾಮದ ರೈತ ಗರುಡಪ್ಪ ಜಂತ್ಲಿ ಸಾಕ್ಷಿಯಾಗಿದ್ದಾರೆ. ಹೊಸತನದಿಂದ ಕೃಷಿ ಮಾಡಬೇಕೆಂಬುದು ಅವರ ಉದ್ದೇಶವಾಗಿದ್ದು, ತೋಟಗಾರಿಕೆ, ಕೃಷಿಯ ವಿವಿಧ ಬೆಳೆ ಬೆಳೆದು ಉತ್ತಮ ಆದಾಯ ಹೊಂದಿದ್ದಾರೆ.

ರೈತ ಗರುಡಪ್ಪ ಜಂತ್ಲಿ ತಮ್ಮ ಸಹೋದರ ದೇವಪ್ಪನ ಮತ್ತು ಕುಟುಂಬದವರ ಸಹಕಾರದೊಂದಿಗೆ ವಿವಿಧ ಬೆಳೆಗಳನ್ನು ಬೆಳೆದು ಉತ್ತಮ ಫಸಲು ಪಡೆಯುತ್ತಿದ್ದಾರೆ. 1992ರಲ್ಲಿ ಗರುಡಪ್ಪ ಅವರಿಗೆ 3 ಎಕರೆ ನೀರಾವರಿ, 6 ಎಕರೆ ಒಣ ಬೇಸಾಯವಿತ್ತು. 3 ಎಕರೆ ನೀರಾವರಿ ಪ್ರದೇಶದಲ್ಲಿ ರೇಷ್ಮೆ ಇತರೆ ಬೆಳೆ ಬೆಳೆಯುವ ಮೂಲಕ ಹಂತ ಹಂತವಾಗಿ ಉತ್ತಮ ಆದಾಯ ಗಳಿಸಿ ಅದರಿಂದ ಬಂದ ಹಣದಲ್ಲಿ ಹೆಚ್ಚು ಭೂಮಿ ಖರೀದಿಸಿ ಸದ್ಯ 31 ಎಕರೆ ಭೂಮಿ ಹೊಂದಿದ್ದಾರೆ. 31 ಎಕರೆ ಜೊತೆಗೆ ಅವರ ಚಿಕ್ಕಪ್ಪನವರ 9 ಎಕರೆ ಭೂಮಿ ಸೇರಿ ಒಟ್ಟು 40 ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ.

ಸದ್ಯ 10 ಎಕರೆ ದ್ರಾಕ್ಷಿ, 10 ಎಕರೆ ಕಬ್ಬು, 10 ಎಕರೆ ಉದ್ದು, 8 ಎಕರೆ ಗೋವಿನಜೋಳ, 2 ಎಕರೆ ಅಡಕೆ ಬೆಳೆದಿದ್ದಾರೆ. ಇದರೊಂದಿಗೆ 150 ಸಾಗವಾನಿ, 20 ಮಾವು, 50 ತೆಂಗು, 2 ನೀರಳೆ, 5 ಚಿಕ್ಕು ಗಿಡಗಳನ್ನು ಬೆಳೆಯಲಾಗಿದ್ದು, ಅವರು ಕೂಡ ಫಸಲು ನೀಡುತ್ತಿವೆ. 3 ವರ್ಷಗಳಿಂದ ದ್ರಾಕ್ಷಿ ಬೆಳೆಯಲು ಪ್ರಾರಂಭಿಸಿದ್ದು, ಪ್ರಸಕ್ತ ವರ್ಷದಲ್ಲಿ ದ್ರಾಕ್ಷಿ ಬೆಳೆಯಲು ಗೊಬ್ಬರ, ಔಷಧ, ನಿರ್ವಹಣೆ ಸೇರಿ 1 ಎಕರೆಗೆ 2 ಲಕ್ಷ ರೂ. ಖರ್ಚು ಮಾಡಿದ್ದು, 20 ರಿಂದ 25 ಟನ್ನಷ್ಟು (35 ಲಕ್ಷ ರೂ.ಗೆ) ಒಣದ್ರಾಕ್ಷಿ ಇಳುವರಿಯ ನಿರೀಕ್ಷೆ ಹೊಂದಿದ್ದಾರೆ.

10 ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದು, ಕಳೆದ ವರ್ಷ 10 ಎಕರೆಯಲ್ಲಿ 6 ಲಕ್ಷ ಖರ್ಚು ಮಾಡಿ 700 ಟನ್ ಕಬ್ಬು ಬೆಳೆದು 15 ಲಕ್ಷ ರೂ.ಗೆ ಮಾರಾಟ ಮಾಡಿ 9 ಲಕ್ಷ ರೂ.ಆದಾಯ ಹೊಂದಿದ್ದಾರೆ. ಈ ಬಾರಿ 3 ಲಕ್ಷ ಖರ್ಚು ಮಾಡಿ 350 ಟನ್ ಕಬ್ಬು ಬೆಳೆದಿದ್ದಾರೆ. ಜಮೀನಿನ ಸುತ್ತ ಬೆಳೆದಿದ್ದ 5 ವರ್ಷದ 150 ಹೆಬ್ಬೇವು ಗಿಡಗಳನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಕಳೆದ ವರ್ಷ 3 ಎಕರೆಯಲ್ಲಿ 20 ಕ್ವಿಂಟಾಲ್ ಉದ್ದು ಬೆಳೆದು ಕ್ವಿಂಟಾಲ್ಗೆ 6 ಸಾವಿರ ರೂ.ನಂತೆ ಮಾರಾಟ ಮಾಡಿ ಖರ್ಚು ತೆಗೆದು 70 ಸಾವಿರ ರೂ.ಆದಾಯ ಪಡೆದಿದ್ದಾರೆ. 12 ಎಕರೆಯಲ್ಲಿ 4 ಲಕ್ಷ ರೂ.ಖರ್ಚು ಮಾಡಿ 400 ಕ್ವಿಂಟಾಲ್ ಗೋವಿನಜೋಳ ಫಸಲು ತೆಗೆದು 8 ಲಕ್ಷದ 40 ಸಾವಿರ ರೂ.ಗೆ ಮಾರಾಟ ಮಾಡುವ ಮೂಲಕ 4.40 ಲಕ್ಷ ರೂ.ಆದಾಯ ಪಡೆದಿದ್ದಾರೆ. ಹೀಗೆ ವಿವಿಧ ಬೆಳೆಗಳಲ್ಲಿ ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ.

6 ತಿಂಗಳ ಹಿಂದೆ 2 ಎಕರೆಯಲ್ಲಿ ಅಡಕೆ ಬೆಳೆದಿದ್ದಾರೆ. ತೋಟದಲ್ಲಿ 8 ಆಕಳು, 4 ಹೋರಿ ಇದ್ದು, ಅವುಗಳಿಂದ ಬರುವ ಸಗಣೆ, ಮೂತ್ರವನ್ನು ಒಂದೆಡೆ ಸಂಗ್ರಹಿಸಿ ಬೆಲ್ಲ, ಹಸಿಹಿಟ್ಟು, ನೀರು ಮಿಶ್ರಣ ಮಾಡಿ ಜೀವಾಮೃತ ತಯಾರಿಸಿ ಹನಿ ನೀರಾವರಿ ಪೈಪ್ ಮೂಲಕ ದ್ರಾಕ್ಷಿ, ಅಡಕೆ, ಇತರ ಬೆಳೆಗಳಿಗೆ ನೀಡುತ್ತಾರೆ. ಸಾವಯವ ಜೊತೆಗೆ ರಾಸಾಯನಿಕ ಗೊಬ್ಬರ ಸಹ ಬೆಳೆಗೆ ನೀಡುತ್ತಾರೆ.

ಗರುಡಪ್ಪ ಜಂತ್ಲಿ ಅವರ ಕೃಷಿ ಕಾಯಕ ಗುರುತಿಸಿದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ಥಳೀಯ ಎಪಿಎಂಸಿಯಿಂದ ಕಾಯಕಯೋಗಿ ಪ್ರಶಸ್ತಿ, ವಿಜಯನಗರ ಸಕ್ಕರೆ ಕಾರ್ಖಾನೆಯಿಂದ ಹೆಚ್ಚು ಕಬ್ಬು ಪೂರೈಸಿದ ರೈತ ಪ್ರಶಸ್ತಿ ನೀಡಿ ಗೌರವಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!