ಹುಬ್ಬಳ್ಳಿ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದ ಗಣೇಶೋತ್ಸವ ಯಶಸ್ವಿ: ಪ್ರಮೋದ್‌ ಮುತಾಲಿಕ್‌

ಹೊಸದಿಗಂತ ವರದಿ ಹುಬ್ಬಳ್ಳಿ:
ಐತಿಹಾಸಿಕವಾದ ರಾಣಿಚೆನ್ನಮ್ಮ (ಈದ್ಗಾ) ಮೈದಾನದ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ವಿರೋಧಿಗಳು ಎಷ್ಟೇ ಅಡ್ಡಿ ಮಾಡಲು ತಂತ್ರ ರೂಪಿಸಿದರು ಗಣೇಶನ ಆರ್ಶೀವಾದ ನಮಗೆ ಸಿಕ್ಕಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ವರ್ಷದ ಮೂರು ದಿನದ ಗಣೇಶೋತ್ಸವ ಕಾರ್ಯಕ್ರಮ ಹಿಂದೂ ಸಂಘಟನೆಗಳು, ಎಲ್ಲ ಗಣೇಶ ಮಂಡಳಿಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿದೆ.‌ ಲಕ್ಷಾಂತರ ಭಕ್ತಿ ಭಾವನೆಗಳಿಗೆ ಸರ್ಕಾರ, ಕೋರ್ಟ್, ಮೇಯರ್ ಈ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹಿಂದೂಪರ ಸಂಘಟನೆಗಳಿಂದ ಧನ್ಯವಾದ ಅಭಿನಂದನೆಗಳು ಎಂದರು.

ಈದ್ಗಾ ಮೈದಾನದಲ್ಲಿ ಈ ಬಾರಿ ಮೂರೇ ದಿನ ಕಾರ್ಯಕ್ರಮ ಮಾಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ಮಾಡೋಣ. ವಿರೋಧಿಗಳು ಇದನ್ನು ತಡೆಯಲು ಹಲವಾರು ತಂತ್ರಗಳನ್ನು ರೂಪಿಸಿದರು. ಆದರೂ ಗಣೇಶ ನಮಗೆ ಬಲ ಕೊಟ್ಟು ಯಾವ ಶಕ್ತಿ ತಡೆಯಲು ಬಿಡಲಿಲ್ಲ. ಹೀಗಾಗಿ ನಮಗೆ ಗಣೇಶನ ಆರ್ಶೀವಾದ ದೊರೆತಿದೆ ಎಂದರು.

ನಾವು 75 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇದ್ದೇವೆ, ಆದರೆ ನಮ್ಮ ನೆಲದಲ್ಲಿ ಗಣೇಶೋತ್ಸವ ಆಚರಣೆ ಮಾಡಲು ನ್ಯಾಯಾಲಯದ ಕಟ್ಟೆಗೆ ಹೋಗಬೇಕು. ಇದೀಗ ಹಿಂದೂಗಳು ಒಂದಾಗಿದ್ದೇವೆ. ಇದಕ್ಕೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವ ಸಾಕ್ಷಿ. ಈವರೆಗೆ ಎಲ್ಲ ಶಾಂತಿಯಿಂದ ಗಣೇಶ ಚತುರ್ಥಿ ಆಚರಣೆ ಮಾಡಿದ್ದೇವೆ ಅದರಂತೆ ವಿಸರ್ಜನೆ ಕಾರ್ಯಕ್ರಮವನ್ನು ಶಾಂತಿಯಿಂದ ನೆರವೇರಿಸೋಣ ಎಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!