April 21, 2026
Tuesday, April 21, 2026
spot_img

ಮುಂಬೈ ಇಂಡಿಯನ್ಸ್ ಗೆ ಭರ್ಜರಿ ಗೆಲುವು: ಪಾಂಡ್ಯಗೆ ಇದು ಟರ್ನಿಂಗ್ ಪಾಯಿಂಟ್ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ ದೊಡ್ಡ ಅಂತರದ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್‌ಗಳಲ್ಲಿ 199 ರನ್ ಕಲೆಹಾಕಿದರೆ, ಗುರಿ ಬೆನ್ನತ್ತಿದ ಗುಜರಾತ್ ತಂಡ ಕೇವಲ 100 ರನ್‌ಗಳಿಗೆ ಕುಸಿದುಬಿದ್ದಿದೆ. ಇದರೊಂದಿಗೆ ಮುಂಬೈ ತಂಡ 99 ರನ್‌ಗಳ ಭಾರೀ ಗೆಲುವು ಸಾಧಿಸಿದೆ.

ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಅಂಕಗಳಿಗಷ್ಟೇ ಸೀಮಿತವಾಗಿಲ್ಲ, ತಂಡದ ಆತ್ಮವಿಶ್ವಾಸ ಹೆಚ್ಚಿಸುವ ಮಹತ್ವದ ತಿರುವು ಎಂದು ಹೇಳಿದ್ದಾರೆ. ಯುವ ಆಟಗಾರರ ಪ್ರದರ್ಶನವೇ ಗೆಲುವಿನ ಪ್ರಮುಖ ಕಾರಣ ಎಂದು ಅವರು ಪ್ರಶಂಸಿಸಿದರು.

ತಿಲಕ್ ವರ್ಮಾ ಅವರ ಬ್ಯಾಟಿಂಗ್ ವಿಶೇಷ ಗಮನ ಸೆಳೆದಿದ್ದು, ಸರಳವಾಗಿ ಆಡಲು ನೀಡಿದ ಸೂಚನೆಯನ್ನು ಅವರು ಚೆನ್ನಾಗಿ ಬಳಸಿಕೊಂಡರು ಎಂದು ಪಾಂಡ್ಯ ಹೇಳಿದರು. ಜೊತೆಗೆ ಮೊದಲ ಪಂದ್ಯ ಆಡಿದ ಆಟಗಾರರು ಹಾಗೂ ಬೌಲರ್‌ಗಳ ಶಿಸ್ತಿನ ಪ್ರದರ್ಶನ ತಂಡಕ್ಕೆ ಬಲ ನೀಡಿತು ಎಂದು ಹೇಳಿದರು.

ಇದನ್ನೂ ಓದಿ:

ಬೌಲಿಂಗ್‌ನಲ್ಲಿ ಆರಂಭದಲ್ಲೇ ವಿಕೆಟ್ ಪಡೆಯಲು ಪ್ರಮುಖ ಬೌಲರ್‌ಗೆ ಜವಾಬ್ದಾರಿ ನೀಡಿದ ನಿರ್ಧಾರ ತಂಡದ ಅವಶ್ಯಕತೆ ಆಧಾರಿತವಾಗಿತ್ತು ಎಂದು ಪಾಂಡ್ಯ ಸ್ಪಷ್ಟಪಡಿಸಿದರು. ಪಂದ್ಯದಲ್ಲಿ ತೋರಿದ ಉತ್ಸಾಹದಿಂದ ದಣಿವು ಕಂಡರೂ, ತಂಡಕ್ಕೆ ಶಕ್ತಿ ತುಂಬುವುದು ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಈ ಗೆಲುವಿನಿಂದ ಮುಂಬೈ ತಂಡ ಮತ್ತೆ ಲಯ ಕಂಡುಕೊಂಡಿದ್ದು, ಮುಂದಿನ ಪಂದ್ಯಗಳಲ್ಲೂ ಇದೇ ಆತ್ಮವಿಶ್ವಾಸ ಮುಂದುವರಿಯುವ ನಿರೀಕ್ಷೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !