ಸೂಚನೆ ಕೊಡುತ್ತಿಲ್ಲ, ಎಚ್ಚರಿಕೆ ನೀಡುತ್ತಾ ಇದ್ದೇನೆ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ರು ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ವಿವಿದೆಡೆ ಮುಂಗಾರುಪೂರ್ವ ಮಳೆ (Pre Monsoon Rain) ಆರಂಭವಾಗಿದ್ದು, ಕೆಲವೆಡೆ ಪ್ರಾಕೃತಿಕ ವಿಕೋಪಗಳಿಂದಾಗಿ ಸಾವು ಸಂಭವಿಸಿವೆ. ಈ ಮಧ್ಯೆ, ಪ್ರಾಕೃತಿಕ ವಿಕೋಪ ತಡೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಗಾರು ಆರಂಭವಾಗುತ್ತಾ ಇದೆ. ಹೀಗಾಗಿ ಬೆಳೆ ರಕ್ಷಣೆಗೆ ಮುಂಜಾಗ್ರತಾ ಕ್ರಮ ವಹಿಸಿ. ನಾನು ಕೇವಲ ಸೂಚನೆ ಕೊಡುತ್ತಿಲ್ಲ, ಎಚ್ಚರಿಕೆ ನೀಡುತ್ತಾ ಇದ್ದೇನೆ. ಸೂಚನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡದಿದ್ದರೆ ಕಠಿಣ ಕ್ರಮಕ್ಕೆ ಸಿದ್ದರಾಗಬೇಕಾಗುತ್ತದೆ ಎಂದು ಹೇಳಿದರು.

ಸರಕಾರದ ಅವಧಿಯಲ್ಲಿ ನಿಮ್ಮ ಕೆಲಸ ವೈಖರಿ ಸರಿ ಇರಲಿಲ್ಲ. ರಾಜ್ಯದ ಜನ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮಳೆ, ಪ್ರವಾಹದಿಂದ ಸಾಕಷ್ಟು ಬೆಳೆ ನಷ್ಟವಾಗಿದೆ. ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಮನೆ ಮಠ ಇಲ್ಲದೇ ನಿರ್ಗತಿಕರಾದರು. ಆದರೆ ನಿಮ್ಮಲ್ಲಿ ಸಾಕಷ್ಟು ಮಂದಿ ಈ ಅನಾಹುತ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ ಎಂಬುದಾಗಿ ಸಿಟ್ಟಾದರು. ಸರಕಾರಕ್ಕೆ ಉತ್ತಮ ಹೆಸರು ತರುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ. ನೀವು ಸರಿಯಾಗಿ ಕೆಲಸ ಮಾಡಿದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಸರಕಾರ ನಿಮ್ಮಿಂದ ಉತ್ತಮ ಕೆಲಸ ಬಯಸುತ್ತದೆ. ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಸಹಿಸುವುದಿಲ್ಲ. ನಾವು ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಕೆಲವು ಭಾಗದಲ್ಲಿ ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಆರಂಭಿಸಲಾಗಿದೆ. ಜೂನ್​​ನಲ್ಲಿ ಮುಂಗಾರು ಪ್ರಾರಂಭವಾಗುತ್ತದೆ. ಏಪ್ರಿಲ್‌ ತಿಂಗಳಿನಲ್ಲಿಯೇ ಮುಂಗಾರುಪೂರ್ವ ಮಳೆ ಪ್ರಾರಂಭವಾಗಿದೆ. ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅನಾಹುತಗಳಾಗಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್​​ಗೆ ಹೋಗಬೇಕು. ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಬಳಿ ಅನುದಾನ ಲಭ್ಯವಿದೆ. ಹೆಚ್ಚುವರಿ ಅಗತ್ಯವಿದ್ದರೆ, ಕೇಳಬೇಕು. ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.

ಮಳೆ ಬಂದು ಮರಗಳು ಬಿದ್ದುಹೋದರೆ, ಕೂಡಲೇ ತೆರವು ಗೊಳಿಸಬೇಕು. ವಿದ್ಯುತ್ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್‌ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿಗಳು, ಸಿಇಓಗಳದ್ದು ಜವಾಬ್ದಾರಿಯುತ ಸ್ಥಾನ. ಜೊತೆಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು. ಕರ್ನಾಟಕದ ಜನತೆ ಬದಲಾವಣೆ ಬಯಸಿದ್ದಾರೆ. ಆಲಸ್ಯ ಬಿಟ್ಟು ಕೆಲಸ ಮಾಡಿ. ಬಹಳ ಜನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು ಕಳೆದ ಕೆಲವು ವರ್ಷಗಳಿಂದ ಪ್ರವಾಹ ನೋಡುತ್ತಾ ಇದ್ದೀರಿ. ಹವಾಮಾನ ಇಲಾಖೆ ಸಂಪರ್ಕ- ಮುನ್ಸೂಚನೆ ಅರಿತು ಕೆಲಸ ಮಾಡಿ. ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರವಾಹ ಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಬೆಳೆಹಾನಿ ಮಾಹಿತಿ ಇರಬೇಕು. ಅನುದಾನ ಅಗತ್ಯವಿದ್ದಲ್ಲಿ ಮನವಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು ಖಡಕ್ ಆಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!