Friday, March 31, 2023

Latest Posts

ಕುತಂತ್ರಿಗಳ ಷಡ್ಯಂತ್ರಗಳಿಗೆ ನಾನು ಜಗ್ಗಲ್ಲ: ಕೆ.ಜಿ. ಬೋಪಯ್ಯ

ಹೊಸದಿಗಂತ ವರದಿ ಮಡಿಕೇರಿ:

‘ಜನ್ಮ ದಿನಾಂಕದ ಕುರಿತು ನಾನು ಸುಳ್ಳು ಮಾಹಿತಿ ನೀಡಿರುವುದಾಗಿ ವ್ಯಕ್ತಿಯೊಬ್ಬರು ನನ್ನ ವಿರುದ್ಧ ನೀಡಿರುವ ದೂರು ಅರ್ಥಹೀನವಾಗಿದೆ. ಪ್ರತಿ ಚುನಾವಣೆ ಸಂದರ್ಭ ವ್ಯವಸ್ಥಿತ ಗ್ಯಾಂಗ್ ಒಂದು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಇದಕ್ಕೆಲ್ಲ ನಾನು ಜಗ್ಗಲ್ಲ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ತಂದೆ ಅನಕ್ಷರಸ್ಥ. ಅವರು ಹೇಳಿದ ಜನ್ಮ ದಿನಾಂಕವನ್ನೇ ನಾನು ಅನುಸರಿಸುತ್ತಿದ್ದೇನೆ. ಚುನಾವಣಾ ಆಯೋಗ ನಮ್ಮ ವಯಸ್ಸನ್ನು ಕೇಳುತ್ತದೆಯೇ ಹೊರತು ಹುಟ್ಟಿದ ಇಸವಿಯನ್ನು ಕೇಳುವುದಿಲ್ಲ. ಮಾಹಿತಿ ಸಲ್ಲಿಸುವ ಸಂದರ್ಭ ಗಡಿಬಿಡಿಯಲ್ಲಿ ಸ್ವಲ್ಪ ಹೆಚ್ಚು, ಕಮ್ಮಿ ಆಗಿರಬಹುದು. ಇದು ದೊಡ್ಡ ಅಪರಾಧವೇನಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಚುನಾವಣೆ ಬಂದಾಗಲೂ ಗ್ಯಾಂಗ್ ಒಂದು ನನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಲೇ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ನನ್ನ ಮನೆ ಅರಣ್ಯ ಭಾಗದಲ್ಲಿದೆ ಎಂದು ಆರೋಪಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು, ಇದೀಗ ನನ್ನ ಜನ್ಮ ದಿನಾಂಕದ ಬಗ್ಗೆ ತಕರಾರು ತೆಗೆದಿದ್ದಾರೆ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ ಎಂದು ಬೋಪಯ್ಯ ಹೇಳಿದರು.

ಪ್ರತೀ ಚುನಾವಣೆ ಬಂದಾಗಲೂ ನನ್ನ ಬಗ್ಗೆ ಸುಳ್ಳು ಆರೋಪ ಮಾಡುತ್ತಾ ನನ್ನ ವಿರುದ್ದ ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಯಾವುದೇ ದಾಖಲೆ ಇಲ್ಲದೆ ಜಿಲ್ಲೆಯ ಕೆಲವು ಡೋಂಗಿ ಪರಿಸರವಾದಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರದ ಮೂಲಕ ಪಿತೂರಿ ನಡೆಸಲಾಗುತ್ತಿದೆ.. ಅದೇ ರೀತಿ ಈ ಬಾರಿಯೂ ತಿಮ್ಮಯ್ಯ ಎಂಬ ವ್ಯಕ್ತಿಯ ಮೂಲಕ ಪರಿಸರವಾದಿಗಳು ದೂರು ಕೊಡಿಸಿದ್ದಾರೆ ಎಂದು ಬೋಪಯ್ಯ ಆರೋಪಿಸಿದರು.

ಕುತಂತ್ರಿಗಳಿಗೆ ಜನರೇ ಪಾಠ ಕಲಿಸಲಿದ್ದಾರೆ: ನನ್ನ ಮತ್ತು ನನ್ನ ಕೆಲಸದ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ. ಕೊಡಗಿನ ಜನತೆ ಈ ಬಾರಿಯೂ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲಿದ್ದಾರೆ. ಕುತಂತ್ರಿಗಳ ಷಡ್ಯಂತ್ರಕ್ಕೆ ಜನ ಪಾಠ ಕಲಿಸಲಿದ್ದಾರೆ. ನನ್ನ ಎಲ್ಲಾ ದಾಖಲೆಗಳು ಸರಿಯಾಗಿ ಇದೆ. ಇಂತಹ ಷಡ್ಯಂತ್ರವನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಪಕ್ಷ ಕೂಡಾ ನನಗೆ ಬೆಂಬಲ ನೀಡಿದೆ ಎಂದು ಕೆ.ಜಿ.ಬೋಪಯ್ಯ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!