IPL ಹರಾಜಿನಲ್ಲಿ ಅನ್‌ ಸೋಲ್ಡ್: ಭಾರತೀಯ ಅನುಭವಿ ವೇಗಿ ತೀವ್ರ ಹತಾಶೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗರು ರಾತ್ರೋರಾತ್ರಿ ಮಿಲಿಯನೇರ್ ಗಳಾಗುತ್ತಾರೆ. ಒಂದೆಡೆ ಉದಯೋನ್ಮುಖ ಯುವಕರು ಕೋಟಿ ಕೋಟಿ ಬಾಚುವ ಕಥೆಗಳು ಹೆಡ್‌ ಲೈನ್‌ ಆದರೆ, ಮತ್ತೊಂದೆಡೆ ಹರಾಜಿನಲ್ಲಿ ಕೆಲವು ಅನುಭವಿ ತಾರೆಗಳು ಒಂದೇ ಬಿಡ್ ಅನ್ನು ಆಕರ್ಷಿಸಲು ವಿಫಲರಾಗಿ ತೆರೆ ಮರೆಗೆ ಸರಿಯುತ್ತಾರೆ.ಶುಕ್ರವಾರ ಕೊಚ್ಚಿಯಲ್ಲಿ ನಡೆದ ಹರಾಜಿನಲ್ಲಿ ಸಹ ಹಾಗೆಯೇ ಆಗಿದೆ ಕ್ರಿಕೆಟ್‌ ಜಗತ್ತಿಗೆ ಅಷ್ಟೇನು ಪರಿಚಯವಿಲ್ಲದ ಕೆಲ ವೇಗಿಗಳು ಕೋಟಿ ಕೋಟಿ ಬಾಚಿದರೆ, ಐಪಿಎಲ್‌ ನಲ್ಲಿ ಈಗಾಗಲೇ ಸಾಮರ್ಥ್ಯ ಸಾಭೀತು ಪಡಿಸಿರುವ ಭಾರತದ ವೇಗಿ ಸಂದೀಪ್ ಶರ್ಮಾ ಅವರ ಹೆಸರು ಯಾವುದೇ ಫ್ರಾಂಚೈಸಿಯ ಆಸಕ್ತಿಯನ್ನು ಸೆಳೆಯಲಿಲ್ಲ. ತಮ್ಮ ತಿರಸ್ಕಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಂದೀಪ್, ತಾನು ಮಾರಾಟವಾಗದೆ ಹೋಗಿದ್ದನ್ನು ನೋಡಿ ಆಘಾತ ಮತ್ತು ನಿರಾಶೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕ್ರಿಕೆಟ್.ಕಾಂ ಜೊತೆಗೆ ಮಾತನಾಡಿದ ಸಂದೀಪ್‌, “ನಾನು ಏಕೆ ಮಾರಾಟವಾಗದೆ ಹೋದೆ ಎಂಬುದು ನನಗೆ ತಿಳಿದಿಲ್ಲ. ನಾನು ಯಾವ ತಂಡಕ್ಕಾಗಿ ಆಡಿದ್ದೀನೋ ಆ ಎಲ್ಲಾ ತಂಡಗಳಿಗೆ ಚೆನ್ನಾಗಿ ಆಡಿದ್ದೇನೆ. ಕೆಲವು ತಂಡಗಳು ನನಗೆ ಬಿಡ್ ಮಾಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ. ನಿಜ ಹೇಳಬೇಕೆಂದರೆ, ನಾನು ಅನ್‌ ಸೋಲ್ಡ್‌ ಆಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ನನ್ನಿಂದ ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ರಣಜಿ ಟ್ರೋಫಿಯ ಕೊನೆಯ ಸುತ್ತಿನಲ್ಲಿ ಸಹ ನಾನು ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ, ನಾನು ಸೈಯದ್ ಮುಷ್ತಾಕ್ ಅಲಿಯಲ್ಲಿಯೂ ಚೆನ್ನಾಗಿ ಮಾಡಿದ್ದೇನೆ.” ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
ಸಂದೀಪ್ ಅವರು ಯಾವುದೇ ಫ್ರಾಂಚೈಸಿಗಾಗಿ ಆಡಿದ್ದರೂ ಸಹ, ವಿಶೇಷವಾಗಿ ಪವರ್‌ಪ್ಲೇಯಲ್ಲಿ ಸ್ಥಿರವಾದ ಪ್ರದರ್ಶನ ತೋರಿದ್ದು ವಿಕೆಟ್ ಟೇಕರ್ ಎನಿಸಿಕೊಂಡಿದ್ದಾರೆ.  “ನಾನು ಯಾವಾಗಲೂ ನನ್ನ ಬೌಲಿಂಗ್‌ನಲ್ಲಿ ಸ್ಥಿರವಾಗಿರಲು ಶ್ರಮಿಸುತ್ತಿದ್ದೇನೆ. ಮತ್ತು ಅದು ನನ್ನ ಕೈಯಲ್ಲಿದೆ. ಆಯ್ಕೆ ಅಥವಾ ಆಯ್ಕೆ ಮಾಡದಿರುವುದನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ. ಅವಕಾಶ ಬಂದರೆ ಒಳ್ಳೆಯದು, ಇಲ್ಲದಿದ್ದರೆ, ನಾನು ಉತ್ತಮ ಕೆಲಸವನ್ನು ಮಾಡುತ್ತಲೇ ಇರುತ್ತೇನೆ, ” ಎಂದು ಸಂದೀಪ್ ನೋವಿನಲ್ಲಿ ಹೇಳಿದರು.
ಸಂದೀಪ್‌ ಹರಾಜಿನಲ್ಲಿ 50 ಲಕ್ಷಗಳ ಮೂಲ ಬೆಲೆಯನ್ನು ಹೊಂದಿದ್ದರು. ತಂಡಕ್ಕೆ ಆಕ್ಕೆ ಆಗಿಲ್ಲವಾದರೂ ಸಂದೀಪ್ ಗೆ ಗಾಯದ ಬದಲಿ ಆಟಗಾರನಾಗಿ ಆಯ್ಕೆಯಾಗುವ ಅವಕಾಶ ಇದೆ. ಟಿ20 ಲೀಗ್‌ನ ಡೈನಾಮಿಕ್ಸ್ ಪರಿಗಣಿಸಿದರೆ, ಆಟಗಾರರಿಗೆ ಗಾಯಗಳು ಬಹಳ ಸಾಮಾನ್ಯವಾಗಿದೆ. ಸಂದೀಪ್ ಅವರಲ್ಲಿರುವ ಪ್ರತಿಭೆ ಮತ್ತು ಅನುಭವವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಬದಲಿ ಆಟಗಾರನಾಗಿ ಫ್ರಾಂಚೈಸಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆಯುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!