October 18, 2026
Sunday, October 18, 2026
spot_img

ನಾನೇ ನೂರು ಸಲ ಮದುವೆಗೆ ಕೇಳಿದ್ದೆ: ಕಾಫಿ ವೀತ್ ಕರಣ್ ಶೋನಲ್ಲಿ ಮದುವೆ ರಹಸ್ಯ ಬಿಚ್ಚಿಟ್ಟ ಸ್ಟಾರ್ ಜೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನಪ್ರಿಯ ಟಾಕ್ ಶೋ ‘ಕಾಫಿ ವೀತ್ ಕರಣ್’ ತನ್ನ ಕೊನೆಯ ಸೀಸನ್ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಈ ಕಾರ್ಯಕ್ರಮದ ಮೊದಲ ಎಪಿಸೋಡ್ ಭರ್ಜರಿಯಾಗಿ ಆರಂಭವಾಗಿದ್ದು, ಇದೀಗ ಎರಡನೇ ಎಪಿಸೋಡ್‌ನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಬಾರಿ ಟಾಲಿವುಡ್‌ನ ಕ್ಯೂಟ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅತಿಥಿಗಳಾಗಿ ಆಗಮಿಸಿ ತಮ್ಮ ವೈವಾಹಿಕ ಜೀವನದ ಮಧುರ ಹಾಗೂ ತಮಾಷೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಶೋ ಆರಂಭವಾಗುತ್ತಿದ್ದಂತೆ ಕರಣ್ ಜೋಹರ್ ಈ ಜೋಡಿಯನ್ನು “ಬ್ಲಾಕ್‌ಬಸ್ಟರ್ ಕಪಲ್” ಎಂದು ಸ್ವಾಗತಿಸಿದರು. ಬಳಿಕ ಅವರ ಮದುವೆ ಪ್ರಪೋಸಲ್ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದರು. ಇದಕ್ಕೆ ರಶ್ಮಿಕಾ ಮುದ್ದಾಗಿ ‘ಇಲ್ಲ’ ಎಂದು ತಲೆಯಾಡಿಸಿದರೆ, ತಕ್ಷಣವೇ ಮಧ್ಯಪ್ರವೇಶಿಸಿದ ವಿಜಯ್ ದೇವರಕೊಂಡ, “ಆಕೆಯೇ ನಾವು ಮದುವೆ ಮಾಡಿಕೊಳ್ಳೋಣ ಎಂದು ಹೇಳಿದಳು” ಎಂದರು. ಅಷ್ಟೇ ಅಲ್ಲದೆ, “ನಾನು ಆಕೆಗೆ ಹೇಳಿದ್ದೆ, ನೀನು ಈಗಾಗಲೇ ನನ್ನ ಬಳಿ ನೂರು ಬಾರಿ ಮದುವೆ ಬಗ್ಗೆ ಕೇಳಿದ್ದೀಯಾ ಅಂತ” ಎಂದು ತಮಾಷೆ ಮಾಡಿದರು. ಇದನ್ನು ಕೇಳಿ ಬೆರಗಾದ ಕರಣ್ ಜೋಹರ್, ರಶ್ಮಿಕಾ ಬಳಿ ನಿಜಕ್ಕೂ ಹಾಗೆ ಕೇಳಿದ್ದೀರಾ ಎಂದು ಖಚಿತಪಡಿಸಿಕೊಂಡಾಗ, ರಶ್ಮಿಕಾ ನಗುತ್ತಲೇ “ನಾನು ಒಂದು ವರ್ಷದವರೆಗೆ ಅವನನ್ನು ಮದುವೆಗಾಗಿ ಕೇಳುತ್ತಲೇ ಇದ್ದೆ” ಎಂದು ಒಪ್ಪಿಕೊಂಡರು.

ಶೋನ ಪ್ರಮುಖ ಆಕರ್ಷಣೆಯಾದ ‘ರಾಪಿಡ್ ಫೈರ್’ ರೌಂಡ್‌ನಲ್ಲಿ ಕರಣ್ ಜೋಹರ್ ರಶ್ಮಿಕಾ ಅವರಿಗೆ ಪ್ರಶ್ನೆಯೊಂದನ್ನು ಕೇಳಿದರು. ‘ಪುಷ್ಪ’ ಚಿತ್ರದ ಸಹನಟ ಅಲ್ಲು ಅರ್ಜುನ್ ಮತ್ತು ‘ಅನಿಮಲ್’ ಚಿತ್ರದ ಸಹನಟ ರಣಬೀರ್ ಕಪೂರ್ ಇವರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದಾಗ, ರಶ್ಮಿಕಾ ಯಾವುದೇ ಯೋಚನೆ ಮಾಡದೆ ತಕ್ಷಣವೇ ಅಲ್ಲು ಅರ್ಜುನ್ ಹೆಸರನ್ನು ಸೂಚಿಸಿದರು.

ಮತ್ತೊಂದು ತಮಾಷೆಯ ಸೆಗ್ಮೆಂಟ್‌ನಲ್ಲಿ, ರಶ್ಮಿಕಾ ಅವರನ್ನು ಹೊರತುಪಡಿಸಿ ಬೇರೆ ಯಾವ ನಟಿಯೊಂದಿಗೆ ಉತ್ತಮ ಆನ್-ಸ್ಕ್ರೀನ್ ಕೆಮಿಸ್ಟ್ರಿ ಇದೆ ಎಂದು ಕರಣ್ ವಿಜಯ್‌ರನ್ನು ಪ್ರಶ್ನಿಸಿದರು. ಆದರೆ ವಿಜಯ್ ಉತ್ತರಿಸುವಷ್ಟರಲ್ಲೇ ಮಧ್ಯೆ ಪ್ರವೇಶಿಸಿದ ರಶ್ಮಿಕಾ, “ಯಾರು ಇಲ್ಲ!” ಎಂದು ತಾವೇ ಉತ್ತರ ನೀಡಿದರು. ಇದಕ್ಕೆ ಮುಗುಳ್ನಕ್ಕ ವಿಜಯ್ ದೇವರಕೊಂಡ, ಮದುವೆ ಜೀವನದ ಸತ್ಯವೊಂದನ್ನು ಬಹಿರಂಗಪಡಿಸುತ್ತಾ, “ಮದುವೆಯ ಮೊದಲ ನಿಯಮವೇ ಹೆಂಡತಿ ಏನು ಹೇಳುತ್ತಾಳೋ ಅದಕ್ಕೆ ತಲೆಯಾಡಿಸುವುದು” ಎಂದು ಹೇಳಿದರು. ಒಟ್ಟಿನಲ್ಲಿ ಈ ಜೋಡಿಯ ಮುಕ್ತ ಹಾಗೂ ಮುದ್ದಾದ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿವೆ.

Must Read