ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಭೂ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಮೀನು ಡಿನೋಟಿಫಿಕೇಷನ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ವಿರುದ್ಧ ತನಿಖೆಯನ್ನು ತ್ವರಿತಗೊಳಿಸುವಂತೆ ಕಾಂಗ್ರೆಸ್ ನಿನ್ನೆ ಲೋಕಾಯುಕ್ತಕ್ಕೆ ಮನವಿ ಮಾಡಿತ್ತು.
ಬೆಂಗಳೂರು ಉತ್ತರ ಕಸಬಾ ಹೋಬಳಿಯ ಗಂಗೇನಹಳ್ಳಿಯಲ್ಲಿ 1.11 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಜಂಟಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಓಡಿಹೋಗುತ್ತಿಲ್ಲ, ಬೇರೆಯವರ ಹೆಸರಿನಲ್ಲಿ ರಕ್ಷಣೆಯನ್ನು ತೆಗೆದುಕೊಳ್ಳಬೇಕಾಗಿಲ್ಲ, ನನಗೆ ಸಂಬಂಧಿಸಿದ ವಿಷಯಗಳಲ್ಲಿ, ಅದು ನನ್ನ ಪತ್ನಿಯ ತಾಯಿಗೆ ಸಂಬಂಧಿಸಿದ ಆಸ್ತಿಯಾಗಿದೆ. ನಾನು ಡಿನೋಟಿಫಿಕೇಶನ್ ಮಾಡಿಲ್ಲ ಎಂದರು.
ಕೃಷ್ಣ ಭೈರೇಗೌಡ ಯಾರನ್ನೋ ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಅವರೇನು ಸತ್ಯ ಹರಿಶ್ಚಂದ್ರನಾ? ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ದೀಯಾ ಗೊತ್ತಿದೆ. ನೀವು ಏನೇ ಮಾಡಿದರೂ ನನ್ನದು ಏನು ಸಿಗುವುದಿಲ್ಲ ಎಂದು ಏಕವಚನದಲ್ಲಿಯೇ ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿರುವ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಈ ಪತ್ರಿಕಾಗೋಷ್ಠಿ ಕಾಂಗ್ರೆಸ್ ನ ಟೂಲ್ ಕಿಟ್. ನಿನ್ನೆ ಯಾರೋ ಅವರಿಗೆ ಸರಿಯಾಗಿ ಸ್ಕ್ರಿಪ್ಟ್ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆಂದು ಕುಮಾರಸ್ಲಾಮಿ ಕುಟುಕಿದರು.
ನಾನು ಎಲ್ಲಿಗೂ ಕದ್ದು ಓಡಿ ಹೋಗೋದಿಲ್ಲ. ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ. ಗೋಗರೆಯುವ ಕೆಲಸವನ್ನು ನಾನು ಮಾಡಿಲ್ಲ. ನಾನು ಯಾವುದೇ ಅಂತಹ ಕೆಟ್ಟ ಕೆಲಸಗಳನ್ನು ಮಾಡಿಲ್ಲ. ಡಿನೋಟಿಫಿಕೇಷನ್ ಆಗಿದೆ, ಅದನ್ನು ನಾನು ಮಾಡಿದ್ದೇನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧ ಇಲ್ಲ ಎಂದು ಸಿಎಂ ರೀತಿ ಹೇಳುವುದಿಲ್ಲ ಎಂದರು.ಈ ಜಮೀನಿನ ಮೂಲ ಮಾಲೀಕರು 21 ವಾರಸುದಾರರನ್ನು ಹೊಂದಿದ್ದು, ಅವರು ಕುಮಾರಸ್ವಾಮಿ ಅವರ ಅತ್ತೆಗೆ ಸಾಮಾನ್ಯ ವಕೀಲರ ಅಧಿಕಾರವನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.