March 25, 2026
Wednesday, March 25, 2026
spot_img

ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ, ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇನೆ: ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಕೆಲ ಇಲಾಖೆಗಳ ನೇಮಕಾತಿ ಬಗ್ಗೆ ಬಜೆಟ್​ನಲ್ಲೂ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸರ್ಕಾರಿ ನೇಮಕಾತಿಗಳಲ್ಲಿ ಒಳಮೀಸಲಾತಿಯ ಸಮಸ್ಯೆಯಿಂದ ವಿಳಂಬವಾಗಿದೆ. ಸದ್ಯದಲ್ಲಿಯೇ ನೇಮಕಾತಿ ಪ್ರಾರಂಭಿಸಿ, ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಮ್ಮ ಸರ್ಕಾರ ನುಡಿದಂತೆ ನಡೆದು ಸರ್ಕಾರಿ ನೇಮಕಾತಿಗಳನ್ನು ಮಾಡಲಿದ್ದು, ಈ ಬಗ್ಗೆ ಬಜೆಟ್​​ನಲ್ಲಿಯೂ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ ಈಗ ವಿರೋಧಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದರಲ್ಲೇ ನಿರತವಾಗಿದೆ ಎಂದು ಸಿಎಂ ಕುಟುಕಿದರು. ಧಾರವಾಡದಲ್ಲಿ ವಿದ್ಯಾರ್ಥಿ ಪ್ರತಿಭಟನೆಗೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು 2 ಕೋಟಿ ಉದ್ಯೋಗ ನೀಡುವುದಾಗಿ ತಿಳಿಸಿದರೇ ಹೊರತು, ಯಾರಿಗೂ ಉದ್ಯೋಗ ದೊರೆಯಲಿಲ್ಲ. ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ನಡೆಸಿದ ಸಂದರ್ಭದಲ್ಲಿ ಯಾವುದೇ ಉದ್ಯೋಗಗಳನ್ನು ನೀಡಲಿಲ್ಲ. ಆದ್ದರಿಂದ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು‌.

ಆರೋಗ್ಯ ಇಲಾಖೆಯ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಮುದ್ರಿತವಾಗಿರುವ ಬಗ್ಗೆ ಚರ್ಚೆಗಳು ಎದ್ದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ, ಯಾವುದೇ ಕೆಲಸವನ್ನು ಮಾಡದೇ, ಈಗ ವಿರೋಧಪಕ್ಷದ ಸ್ಥಾನದಲ್ಲಿದ್ದುಕೊಂಡು ಕೇವಲ ಪ್ರತಿಭಟನೆ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !