ಹೊಸದಿಗಂತ ವರದಿ,ಮಂಡ್ಯ:
ಬಿಜೆಪಿ ಪಕ್ಷ ಕಟ್ಟುವ ಕೆಲಸವನ್ನು ಜನವರಿ ನಂತರ ಸಕ್ರಿಯವಾಗಿ ತೊಡಗುವ ಮೂಲಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರ ಬಿಟ್ಟುಕೊಟ್ಟೆ, ನನ್ನ ಅಧಿಕಾರದಲ್ಲಿ ಐದು ವರ್ಷ ನನ್ನ ಸ್ವಂತ ಕೆಲಸಗಳಿಗೆ ಸಮಯ ಸಿಕ್ಕಿರಲಿಲ್ಲ, ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ ಅಷ್ಟೇ, ಜೊತೆಗೆ ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ಸಮಯ ತೆಗೆದುಕೊಂಡಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಅಂತ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಬಿಜೆಪಿ ಶಕ್ತಿ ಹೆಚ್ಚು ಮಾಡಬೇಕು ಎನ್ನುವ ಮಾತು ತಿಳಿಸಿದ್ದೇನೆ. ನಾನು ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬೆಂಬಲಿಗರು ಅಧಿಕಾರ ಸಿಗಲಿ ಎನ್ನುವುದು ತಪ್ಪಿಲ್ಲ, ನನ್ನ ರಾಜಕಾರಣ ಮಂಡ್ಯದಲ್ಲಿ ಇರುತ್ತದೆ ಎಂದಿದ್ದಾರೆ.