ಇರಾನ್‌ ವಿಮಾನದಲ್ಲಿ ಬಾಂಬ್‌ ಬೆದರಿಕೆ: ಅಖಾಡಕ್ಕಿಳಿದ ಭಾರತೀಯ ವಾಯುಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾನ್ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆ ಸಂದೇಶ ಬಂದಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಭಾರತೀಯ ವಾಯುಪ್ರದೇಶದ ಮೂಲಕ ಪ್ರಯಾಣಿಕರೊಂದಿಗೆ ಇರಾನ್‌ನ ಟೆಹ್ರಾನ್‌ನಿಂದ, ಚೀನಾದ ಗುವಾಂಗ್‌ಝೌಗೆ ತೆರಳುತ್ತಿದ್ದ ಮಹಾನ್ ಏರ್ ವಿಮಾನದಲ್ಲಿ ಬಾಂಬ್‌ ಇರುವುದಾಗಿ ದೆಹಲಿ ಪೊಲೀಸರಿಗೆ ಸೋಮವಾರ ಬೆಳಗ್ಗೆ 9.30ರ ವೇಳೆಗೆ ಕರೆ ಬಂದಿದೆ ಎನ್ನಲಾಗಿದೆ. ಕೂಡಲೇ ಅಖಾಡಕ್ಕಿಳಿದ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಇರಾನ್ ವಿಮಾನವನ್ನು ಹಿಂಬಾಲಿಸಿ ವೈಮಾನಿಕ ಪ್ರದೇಶ ದಾಟಿದ ಬಳಿಕ ಹಿಂದಿರುಗಿವೆ. ಸದ್ಯ ವಿಮಾನ ಚೀನಾದತ್ತ ಸಾಗುತ್ತಿದ್ದು, ಕ್ಷಣಕ್ಷಣದ ಬೆಳವಣಿಗೆಯನ್ನು ಭಾರತೀಯ ವಾಯುಪಡೆ ಗಮನಿಸುತ್ತಿದೆ.

ಹೊಸದಿಲ್ಲಿಯ ವಾಯುಪ್ರದೇಶದ ಕಡೆಗೆ ಚಲಿಸುತ್ತಿದ್ದ ಇರಾನ್ ಮೂಲದ ವಿದೇಶಿ ವಿಮಾನವನ್ನು ತಡೆಯಲು ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಸುತ್ತಿವರೆದಿವೆ. ಮೂಲಗಳ ಪ್ರಕಾರ, ವಿಮಾನದಲ್ಲಿ ಬಾಂಬ್ ಇರುವ ಸಾಧ್ಯತೆಯಿದೆ ಎಂದು ದೆಹಲಿಯ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ಲಭ್ಯವಾಗಿದ್ದರಿಂದ ವಿಮಾನವನ್ನು ದೆಹಲಿಯಲ್ಲಿ ಇಳಿಯಲು ಅನುಮತಿಗೆ ನಿರಾಕರಿಸಿ ಬದಲಿಗೆ ಜೈಪುರದಲ್ಲಿ ಲ್ಯಾಂಡಿಂಗ್‌ ಮಾಡುವಂತೆ ಪೈಲಟ್‌ಗೆ ದೆಹಲಿ ಎಟಿಸಿ ಸೂಚಿಸಿದೆ.

ಜೈಪುರದಲ್ಲಿ ವಿಮಾನ ಇಳಿಸಲು ಪೈಲಟ್‌ ನಿರಾಕರಿಸಿದ್ದರಿಂದ ಪಂಜಾಬ್ ಮತ್ತು ಜೋಧ್‌ಪುರ ವಾಯುನೆಲೆಗಳಿಂದ ಭಾರತೀಯ ವಾಯುಪಡೆಯ Su-30MKI ಫೈಟರ್ ಜೆಟ್‌ಗಳ ಬಿಗಿ ಭದ್ರತೆಯಲ್ಲಿ ವಿಮಾನವನ್ನು ಭಾರತೀಯ ವಾಯುಪ್ರದೇಶದ ಗಡಿ ದಾಟಿಸಿವೆ. ಈ ವರದಿ ಮಾಡುವ ಸಂದರ್ಭದಲ್ಲಿ ವಿಮಾನ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿದ್ದಾಗಿ ಅಧಿಕಾರಿಗಳು ತಿಳಿಸಿದರು. ಇದೀಗ ವಿಮಾನ ಚೀನಾದತ್ತ ಸಾಗಿದ್ದು, ಬಾಂಬ್ ಬೆದರಿಕೆಯ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ.

ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!