2ಎ ಮೀಸಲಾತಿ ಘೋಷಣೆಯಾದರೆ ಸನ್ಮಾನ, ಇಲ್ಲವೇ ವಿರಾಟ ಸಮಾವೇಶ: ಜಯಮೃತ್ಯುಂಜಯ ಶ್ರೀ

ಹೊಸದಿಗಂತ ವರದಿ,ಗದಗ:

ಎರಡು ವರ್ಷದ ಹೋರಾಟದ ಪರಿಣಾಮ ಸರ್ಕಾರ ಡಿ. ೧೯ ರಂದು ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ಘೋಷಿಸಲಿದೆ ಎಂಬ ಭರವಸೆ ಇದೆ ಎಂದು ಕೂಡಲ ಸಂಗಮದ ಬಸವಜಯಮೃತ್ಯುಂಜಯ ಶ್ರೀಗಳು ಹೇಳಿದರು.

ನಗರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ ಡಿ. ೧೭ ರಂದು ನಗರದ ತೋಂಟದಾರ್ಯ ಮಠದಿಂದ ರ‍್ಯಾಲಿ ಮಾಡಿ ಸಮಾವೇಶ ಮಾಡಲಿದ್ದೇವೆ. ಡಿ.
೧೯ ರಂದು ಸವದತ್ತಿಯಲ್ಲಿ ಕೊನೆಯ ಸಮಾವೇಶ ನಡೆಯಲಿದೆ. ಅಂದು ಮೀಸಲಾತಿ ಘೋಷಣೆಯಾದಲ್ಲಿ ಅಲ್ಲೇ ಸಂಭ್ರಮಾಚರಣೆ ಮಾಡುತ್ತೇವೆ. ಡಿ.೨೨ ರಂದು ಬೆಳಗಾವಿಯ ಸುವರ್ಣ ಸೌಧ ಆವರಣದಲ್ಲಿ ೨೫ ಲಕ್ಷ ಜನರನ್ನು ಸೇರಿಸಿ ಸಿಎಂಗೆ ಸನ್ಮಾನ ಮಾಡಲಾಗುವುದು. ಮೀಸಲಾತಿ ಘೋಷಣೆಯಾದರೆ ಸಿಎಂಗೆ ಕಲ್ಲುಸಕ್ಕರೆ ತುಲಾಬಾರ ಮಾಡಿ, ಹಸಿರು ಶಾಲು ಹಾಕಿ, ವಿಜಯಪುರ ರುಮಾಲು ಸುತ್ತಿ, ಗೋಕಾಕ್ ಕರದಂಟು ತಿನ್ನಿಸುವದಲ್ಲದೆ, ಮಠದಲ್ಲಿ ಅವರ ಫೋಟೋ ಹಾಕಿ ಗೌರವ ನೀಡುತ್ತೇವೆ. ಒಂದು ವೇಳೆ ಮೀಸಲಾತಿ ವಿಳಂಬವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ ಶ್ರೀಗಳು ಎರಡು ವರ್ಷದಿಂದ ಹೋರಾಟ ಮಾಡಿದ್ದೇನೆ ಬೇರೆ ವಿಷಯ ಗೊತ್ತಿಲ್ಲ. ಈ ನಡುವೆ ಯಾರು ಹೋರಾಟ ಮಾಡಿದರು ಅನ್ನುವುದು ಗೊತ್ತಿಲ್ಲ. ಪಾಪ ಯಾರೋ ಹೋರಾಟ ಮಾಡುತ್ತಾರೆ ಮಾಡಿಕೊಳ್ಳಲಿ ಎಂದು ವಚನಾನಂದ ಶ್ರೀಗಳ ಹೋರಾಟದ ವಿಷಯಕ್ಕೆ ಬಸವಜಯ ಮೃತ್ಯುಂಜಯ ಪ್ರತಿಕ್ರಿಯಿಸಿದರು.

ನಾಡು ನುಡಿ ವಿಷಯ ಬಂದಾಗ ನಾವು ಕನ್ನಡ ಪರವೇ ನಿಂತಿದ್ದೇವೆ. ಮಹಾರಾಷ್ಟ್ರ ಸರ್ಕಾರವೇ ಮಹಾಜನ ಸಮಿತಿ ನೇಮಕ ಮಾಡಿತ್ತು.
ಸಮಿತಿ ವರದಿ ಪ್ರಕಾರ ಬೆಳಗಾವಿ ಸೇರಿದಂತೆ ಸಾಂಗ್ಲಿ ಕರ್ನಾಟಕಕ್ಕೆ ಸೇರಬೇಕು. ಅವರ ಸಮಿತಿಯಲ್ಲೇ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ಆಗಿದೆ. ಆದರೆ, ವಿನಾಕರಣ ಮಹಾರಾಷ್ಟ್ರ ಸರ್ಕಾರ ಗಡಿ ಖ್ಯಾತೆ ತೆಗೆಯವ ಪ್ರಯತ್ನ ಮಾಡಬಾರದು. ತಂಟೆ ತಕರಾರು ಬಂದರೆ ಚನ್ನಮ್ಮ, ರಾಯಣ್ಣನ ಅಭಿಮಾನಿಗಳು ಒಂದಿಂಚು ಭೂಮಿಯನ್ನೂ ಕೊಡಲ್ಲ. ಗಡಿ ವಿಷಯವಾಗಿ ಸರ್ಕಾರದ ಪರವಾಗಿದ್ದೇವೆ. ಸರಕಾರ ದಿಟ್ಟತನದ ನಿರ್ಧಾರ ತೆಗೆದುಕೊಳ್ಳಲಿ. ಮೀಸಲಾತಿ ಹೋರಾಟದಲ್ಲಿದ್ದರೂ ಗಡಿ ಪ್ರದೇಶದ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಬಸವಜಯಮೃತ್ಯುಂಜಯ ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಅಯ್ಯಪ್ಪ ಅಂಗಡಿ, ಮಹೇಶ ಕರಿಬೀಷ್ಠಿ, ಬಸವರಾಜ ಗಡ್ಡಪ್ಪನವರ, ಸಂಗಮೇಶ ಕವಳಿಕಾಯಿ ಸೇರಿದಂತೆ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!