ಕೇಶ್ವಾಪುರದಲ್ಲಿನ ನಾಪತ್ತೆ, ಕೊಲೆ ಪ್ರಕರಣ: ಏಳು ಜನರ ಬಂಧನ

ಹೊಸದಿಗಂತ ವರದಿ,ಹುಬ್ಬಳ್ಳಿ:

ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ನಾಪತ್ತೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಹತ್ಯೆಯಲ್ಲಿ ಭಾಗಿಯಾಗಿದ್ದ ಮೃತನ ತಂದೆ ಸೇರಿ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮೃತ ದೇಹ ಪತ್ತೆ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವ ಹಸ್ತಾಂತರಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಭೂ ರಾಮ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಶ್ವಾಪುರದ ಅರಿಹಂತ ನಗರದ ಕಟ್ಟಡ ಸಾಮಾಗ್ರಿಗಳ ವ್ಯಾಪಾರಿ ಅಖಿಲ ಮಹಾಜನಶೇಠ ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಚಿಕ್ಕಪ್ಪ ಮನೋಜ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ಕೈಗೊಂಡ ಸಮಯದಲ್ಲಿ ಅಖಿಲ ತಂದೆ ಹೇಳಿಕೆಗೂ ಹಾಗೂ ದೂರು ನೀಡಿರುವುದಕ್ಕೂ ವ್ಯತ್ಯಾಸ ಬಂದಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಆದರಿಂದ ತಂದೆ ಭರತ್ ಮಹಾಜನ ಶೇಟ್ ವಶಕ್ಕೆ ಪಡೆದು ಸಂಪೂರ್ಣ ವಿಚಾರಣೆ ನಡೆಸಿದಾಗ ಹತ್ಯೆಗೆ ಸುಪಾರಿ ನೀಡಿರುವುದು ಬಾಯಿಬಿಟ್ಟಿದ್ದ ಎಂದರು.

ಈ ನಿಟ್ಟಿನಲ್ಲಿ ವಿವಿಧ ಆಯಾಮದಲ್ಲಿ ತನಿಖೆಗೆ ಮುಂದುವರಿಸಿದಾಗ ಮಧ್ಯವರ್ತಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದಾಗ ಹತ್ಯೆ ಮಾಡಿದವರ ಬಗ್ಗೆ ತಿಳಿದು ಬಂದಿದೆ. ಕೊಲೆ ಮಾಡಿದ ಒಬ್ಬನ್ನು ಮಂಗಳವಾರ ರಾತ್ರಿ ಹಾಗೂ ಬುಧವಾರ ಮೂವರನ್ನು ಬಂಧಿಸಲಾಗಿದೆ. ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತನಿಖೆವೇಳೆ ತಿಳಿದು ಬಂದಿದೆ. ತಂದೆಯೇ ಯಾಕೆ ಮಗನನ್ನು ಕೊಲೆ ಮಾಡಿಸಿದ ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಮೃತ ದೇಹವನ್ನು ಕಲಘಟಗಿಯ ದೇವಿಕೊಪ್ಪದ ಜಮೀನನಲ್ಲಿ ಹೊಳಲಾಗಿತ್ತು. ಎಸಿಯವರ ಸಮ್ಮುಖದಲ್ಲಿ ದೇಹವನ್ನು ತೆಗೆಸಲಾಗಿದೆ ಎಂದು ತಿಳಿಸಿದರು.

ತನಿಖಾ ತಂಡದಲ್ಲಿ ಎಸಿಪಿ ವಿನೋದ ಮುಕ್ತೆದಾರ, ಪೊಲೀಸ್ ಅಧಿಕಾರಿಗಳಾದ ಜಗದೀಶ ಹಂಚಿನಾಳ, ಆನಂದ ಒನಕುದರಿ, ಜೆ.ಎಂ. ಕಾಲಿಮಿರ್ಚಿ, ವೈ.ಎಚ್. ಸಾತೇನಹಳ್ಳಿ ಹಾಗೂ ವಿವಿಧ ಠಾಣೆಯ ಸಿಬ್ಬಂದಿಗಳಿದ್ದರು.

ಎಸಿಪಿ ಕಾನೂನು ಹಾಗೂ ಸುವ್ಯಸ್ಥೆ ಸಾಹಿಲ್ ಬಾಗ್ಲಾ, ಎಸಿಪಿ ಸಂಚಾರಿ ಹಾಗೂ ಅಪರಾಧ ಗೋಪಾಲ ಬ್ಯಾಕೋಡ ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!