ಅಮಿತ್​ ಶಾ ಈ ಮಾತು ನಡೆಸಿಕೊಟ್ಟಿದ್ದರೆ ‘ಮಹಾ ವಿಕಾಸ್ ಅಘಾಡಿ’ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ: ಉದ್ಧವ್ ಠಾಕ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

‘ಮಹಾ’ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಫೇಸ್​​ಬುಕ್​ ಲೈವ್ ಮೂಲಕ ಮತ್ತೊಮ್ಮೆ ಮಾತನಾಡಿದ್ದು, ‘ಈ ಕೆಲಸವನ್ನು ಅಮಿತ್ ಶಾ ಈ ಹಿಂದೆ ಗೌರವಯುತವಾಗಿ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು’ ಎಂದರು.

‘ಈ ಹಿಂದೆ ಅಮಿತ್ ಶಾ ಅವರಿಗೆ ನಾನು ಈ ಮಾತು ಹೇಳಿದ್ದೆ. 2.5 ವರ್ಷಗಳ ಕಾಲ ಶಿವಸೇನೆ ಸಿಎಂ ಆಗಿರಬೇಕು ಎಂದಿದ್ದೆ. ಅವರು ಇದನ್ನು ಮೊದಲೇ ಮಾಡಿದ್ದರೆ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಇದೀಗ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಶಿವಸೇನೆಯ ಅಭ್ಯರ್ಥಿ ಅಲ್ಲ’ ಎಂದು ಹೇಳಿದರು.

‘ನಾನು ರಾಜೀನಾಮೆ ನೀಡಿದ ಬಳಿಕ ನನಗೆ ಜನರಿಂದ ಅಪಾರ ಪ್ರೀತಿಪೂರ್ವಕ ಸಂದೇಶಗಳು ಬಂದಿವೆ. ದಿಢೀರ್ ಆಗಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ವ್ಯಕ್ತಿ ರಾಜೀನಾಮೆ ನೀಡಿದಾಗ ತುಂಬಾ ಪ್ರೀತಿ ಮತ್ತು ಗೌರವ ಸಿಕ್ಕಿರುವುದು ಸಂತೋಷ ಮೂಡಿಸಿದೆ ಎಂದರು.

ಮೆಟ್ರೋ 3 ಕಾರ್ ಶೆಡ್ ಸ್ಥಳಾಂತರಕ್ಕೆ ಆಕ್ರೋಶ

ಆರೆ ಕಾಲೋನಿಯಿಂದ ಮೆಟ್ರೋ 3 ಕಾರ್ ಶೆಡ್ ಅನ್ನು ಸ್ಥಳಾಂತರಿಸುವ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಸರ್ಕಾರದ ನಿರ್ಧಾರವು ಆರೆ ಅರಣ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶಕ್ಕೆ ಕಾರಣವಾಗುತ್ತದೆ’ ಎಂದು ಆತಂಕವನ್ನು ವ್ಯಕ್ತಪಡಿಸಿದರು.ನನ್ನ ಮೇಲಿರುವ ಕೋಪವನ್ನು ಮುಂಬೈ ಜನತೆ ಮೇಲೆ ತೋರಿಸಬೇಡಿ. ಮೆಟ್ರೋ ಶೆಡ್ ಪ್ರಸ್ತಾವನೆಯನ್ನು ಬದಲಾಯಿಸಬೇಡಿ. ಮುಂಬೈನ ಪರಿಸರದೊಂದಿಗೆ ಆಟವಾಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಿಂಧೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಉದ್ಧವ್ ಠಾಕ್ರೆ ಆರೆ ಕಾಲೋನಿ ಮೂಲಕ ಹಾದುಹೋಗುವ ಕೊಲಾಬಾ-ಬಾಂದ್ರಾ-ಸೀಪ್ಜ್ ಮೆಟ್ರೋ 3 ಕಾರಿಡಾರ್ ನಿರ್ಮಾಣವನ್ನು ತಡೆಹಿಡಿದಿದ್ದರು ಮತ್ತು ಪರ್ಯಾಯ ಸ್ಥಳಗಳನ್ನು ಗುರುತಿಸಲು ಸಮಿತಿಯನ್ನು ನೇಮಿಸಿದ್ದರು. ಅಘಾಡಿ ಸರ್ಕಾರವು ಆರೆ ಕಾಲೋನಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!