28 ಸ್ಥಾನ ಗೆಲ್ಲಿಸಿಕೊಟ್ಟರೆ ಮೇಕೆದಾಟು ಯೋಜನೆಗೆ ಮೋದಿ ಕೈಹಿಡಿದು ಸಹಿ ಹಾಕಿಸುತ್ತೇನೆ: ಹೆಚ್‌.ಡಿ.ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ 28 ಸ್ಥಾನ ಗೆಲ್ಲಿಸಿಕೊಟ್ಟರೆ ಮೇಕೆದಾಟು ಯೋಜನೆಗೆ ಮೋದಿ ಕೈಹಿಡಿದು ಸಹಿ ಹಾಕಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಜನತೆಗೆ ಭರವಸೆ ನೀಡಿದ್ದಾರೆ.

ಹಾರೋಹಳ್ಳಿಯಲ್ಲಿ ಅಳಿಯ, ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಪ್ರಚಾರ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಬ್ಬರದ ಭಾಷಣ‌ ಮಾಡಿದರು.

ನನಗೆ ಕನಕಪುರ ಹೊಸದಲ್ಲ. ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನ ನಿಲ್ಲಿಸಿ ಸೋಲಿಸಿದ್ದರು. ಮತ್ತೆ ಅದೇ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಆಗಿದ್ದೆ. ನನ್ನನ್ನ ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ ಎಂದು ನೆನಪಿಸಿಕೊಂಡರು.

ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ನಿಲ್ಸಿದ್ರು ಅಂತ ಮಾತಾಡಿದ್ದಾರೆ. ಡಾ.ಮಂಜುನಾಥ್ ನನ್ನ ಅಳಿಯ ಅನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದವರು. ಇವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿದರು. ಅವರನ್ನು ಬಿಜೆಪಿಯಿಂದ ನಿಲ್ಲಿಸಿದರು. ಈಗ ಮಂಜುನಾಥ್ ಎನ್ನುವ ಹೆಸರಿನ ಮೂರು ಜನರನ್ನು ನಿಲ್ಲಿಸಿದ್ದಾರೆ. ಮಹಾನುಭಾವರು ಎಂತಹ ಬುದ್ದಿ ಬಳಕೆ‌ ಮಾಡಿದ್ದಾರೆ. ಆದರೆ ಡಾ.ಮಂಜುನಾಥ್ ನಂಬರ್ 1 ಡಾಕ್ಟರ್. ಅವರ ಕ್ರಮ ಸಂಖ್ಯೆ ಕೂಡಾ ನಂಬರ್ ಓನ್. ನರೇಂದ್ರ ಮೋದಿ, ಅಮಿತ್ ಆಯ್ಕೆ ಮಾಡಿರೋ ವ್ಯಕ್ತಿ ಡಾ.ಮಂಜುನಾಥ್. ದೇಶದಲ್ಲಿ ಸೇವೆ ಮಾಡುವ ಅವಕಾಶವನ್ನು ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಮೋದಿ ಅವರು ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮೊನ್ನೆ ಚಿಕ್ಕಬಳ್ಳಾಪುರದಲ್ಲಿ ನನಗೆ ಭರವಸೆ ನೀಡಿದ್ದಾರೆ. ನಾನೂ ಅವರಿಗೆ ಒಂದು ಮಾತು ಕೊಟ್ಟಿದ್ದೇನೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ನೀವು 28 ಸ್ಥಾನಗಳನ್ನು ನೀಡಿದ್ರೆ ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೇನೆ ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಹೃದಯ ಚಿಕಿತ್ಸೆ ಆದರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ 10 ವರ್ಷದಲ್ಲಿ ದೇಶ ಅಭಿವೃದ್ಧಿ ಮಾಡಿದ್ದಾರೆ. ಅಂತಹವರಿಗೆ ಖಾಲಿ ಚೊಂಬು ತೋರಿಸ್ತಾರೆ. ನೀವು ಯಾರಿಗೆ ತೋರಿಸ್ತಿದ್ದೀರಿ, ಹುಡುಗಾಟಿಕೆ, ತಮಾಷೆನಾ? ನೀವು ನೀಡಿದ್ದ ಖಾಲಿ ಚೊಂಬನ್ನು ಅವರು ಅಕ್ಷಯ ಪಾತ್ರೆ ಮಾಡಿದ್ದಾರೆ. ರಾಜ್ಯದಲ್ಲಿ ಇರುವ ಭ್ರಷ್ಟ ಸರ್ಕಾರವನ್ನ ತೆಗೆಯುವವರೆಗೂ ನಾನು ಕೂರುವುದಿಲ್ಲ. ನೀವೆಲ್ಲ ಕೈ ಎತ್ತಿ ಡಾ.ಮಂಜುನಾಥ್ ಗೆಲ್ಲಿಸುತ್ತೇನೆ ಎಂದು ಶಕ್ತಿ ನೀಡಿ. ಡಾ.ಮಂಜುನಾಥ್ ಅತ್ಯಂತ ಅಧಿಕ ಮತಗಳಿಂದ ಗೆಲ್ಲಲು ಆಶೀರ್ವಾದ ಮಾಡಿ ಎಂದು ಅಳಿಯನ ಪರ ಮಾಜಿ ಪ್ರಧಾನಿ ಮತಯಾಚನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!