ದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಎಷ್ಟೊ ಹಿಂದೂ ಮಹಿಳೆಯರ ಹತ್ಯೆ ಹಾಗೂ ದೌರ್ಜನ್ಯ ನಡೆದರೂ ಬಿಜೆಪಿ ಪ್ರತಿಭಟನೆ ಮಾಡಿಲ್ಲ. ಮುಸ್ಲಿಂ ಯುವಕ ಹಿಂದೂ ವಿದ್ಯಾರ್ಥಿನಿ ಕೊಲೆ ಮಾಡಿದ್ದರಿಂದ ಬಿಜೆಪಿ ಅವರು ಪ್ರಚಾರ ಪಡೆಯುತ್ತಿದ್ದು, ಹಿಂದೂಗಳ ಹತ್ಯೆಯಾದರೆ ಬಿಜೆಪಿಗೆ ಹಬ್ಬ ಎಂದು ಸಚಿವ ಸಂತೋಷ ಲಾಡ್ ಗಂಭೀರ ಆರೋಪ ಮಾಡಿದರು.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆ ಬಗ್ಗೆ ಮಾತನಾಡುವ ಸೂಕ್ತ ಸಂದರ್ಭ ಇದಲ್ಲ. ಬಿಜೆಪಿ ಅವರು ನೇಹಾ ಹಿರೇಮಠ ಅವರ ಮನೆ ಪ್ರಚಾರ ತಾಣವಾಗಿ ಮಾಡಿಕೊಂಡಿದ್ದಾರೆ. ಪ್ರತಿದಿನ ಬಿಜೆಪಿ ನಾಯಕರು ಅಲ್ಲಿಗೆ ಬರುವುದು, ಕುಟುಂಬದವರಿಗೆ ಕುಮ್ಮಕ್ಕು ನೀಡುವುದು ಹಾಗೂ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಗೆ ಯಾವುದೇ ಹಿನ್ನಡೆ ಯಾಗುವುದಿಲ್ಲ ಎಂದರು.
ನಿರಂಜನ ಹಿರೇಮಠ ನನ್ನ ಪ್ರಾಣ ಸ್ನೇಹಿತ. ಅವರಿಗೆ ಕೈ ಮುಗಿದು ಕೇಳುತ್ತೇನೆ ದಯಮಾಡಿ ಪಕ್ಷದ ಬಗ್ಗೆ ಮಾತನಾಡುವುದು ಬಿಡಬೇಕು. ನಿಮ್ಮ ದುಃಖ ನಮಗೆ ಅರ್ಥವಾಗುತ್ತದೆ. ಬಿಜೆಪಿ ಅವರು ನಿಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಾಲಾಯಕ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಸಂತೋಷ ಲಾಡ್, ನೀವು ಮೊದಲ ಬಾರಿಗೆ ಶಾಸಕರಾದವರು. ನಿಮ್ಮ ತಂದೆ ಯಡಿಯೂರಪ್ಪ ಬಿಟ್ಟರೆ ನೀವು ಸಂಪೂರ್ಣ ಶೂನ್ಯ. ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು, ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ದಿಂಗಾಲೇಶ್ವ ಸ್ವಾಮೀಜಿ ಅವರು ನಾಮಪತ್ರ ಹಿಂಪಡೆದಿದ್ದು, ಅವರ ಆಶೀರ್ವಾದ ಪಡೆಯಲು ಬಂದಿದೇವೆ. ಅವರು ನಮ್ಮ ಪಕ್ಷಕ್ಕೆ ಸಹಕಾರ ನೀಡಿದರೆ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.