Friday, February 3, 2023

Latest Posts

ಜನರನ್ನು ಮರೆತರೆ ರಾಜಕೀಯ ಪಕ್ಷಗಳು ನಾಶವಾಗುತ್ತವೆ: ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ ಮಡಿಕೇರಿ:

ರಾಜಕೀಯ ಪಕ್ಷಗಳು ಜನ ಹಾಗೂ ಸಮಾಜವನ್ನು ಮರೆತರೆ ನಾಶವಾಗುತ್ತವೆ, ದೇಶದಲ್ಲಿ ಈಗಾಗಲೇ ಕೆಲವು ರಾಜಕೀಯ ಪಕ್ಷಗಳು ಹೀಗೆ ಆಗಿವೆ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಬಿಜೆಪಿ ಹಾಗೂ ಮಡಿಕೇರಿ ನಗರ ಬಿಜೆಪಿ ವತಿಯಿಂದ ನಗರದ ವಿದ್ಯಾನಗರದ ಬೂತ್’ನಲ್ಲಿ ನಡೆದ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಸಾಧನೆ ಮತ್ತು ಯೋಜನೆಯನ್ನು ಜನರಿಗೆ ತಿಳಿಸುವುದೇ ಬೂತ್’ನ ಮುಖ್ಯ ಕೆಲಸ. ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಬೂತ್’ಗಳನ್ನು ಶಕ್ತಿಶಾಲಿಯಾಗಿ ಮಾಡಬೇಕೆಂದು ಕರೆ ನೀಡಿದರು.

ಬಿಜೆಪಿ ಪಕ್ಷ ಹೊರಟಿರುವುದು ದೇಶ ಕಟ್ಟಲು. ಪ್ರಪಂಚದ ಗುರುವಾಗುವ ನಿಟ್ಟಿನಲ್ಲಿ ಅಧಿಕಾರ ಹಿಡಿಯಲು ನಮ್ಮ ಪಣ. ಗೆಲ್ಲಲು ಮಾತ್ರ ನಾವು ಕಾರ್ಯಕ್ರಮ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದ ಎಲ್ಲಾ ಕಾರ್ಯಕ್ರಮವನ್ನು ಮನೆ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕೆಂದರು. ವಾಜಪೇಯಿ ಸರ್ಕಾರದಲ್ಲಿ ಸರ್ವ ಶಿಕ್ಷಣ ಅಭಿಯಾನ ಮಾಡಿದ್ದೇವೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ಮನೆ ಮನೆಗೆ ಗ್ಯಾಸ್, ಸ್ವಚ್ಛ ಭಾರತ್ ಅಭಿಯಾನ, ರೈತ ಸಮ್ಮಾನ್ ಸೇರಿ ಹಲವು ಕಾರ್ಯಕ್ರಮ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನುಕೂಲವಾಗುವ ರೀತಿಯಲ್ಲಿ ಹಲವು ಯೋಜನೆಗಳನ್ನು ರೂಪಿಸಿ ತಲುಪಿಸಿದ್ದು ನಮ್ಮ ಸರ್ಕಾರ. ಕೊಡಗಿನ ರೈತರಿಗೆ ಸರ್ಕಾರ 125 ಕೋಟಿ ರೂ. ಮಳೆ ಹಾನಿ ಪರಿಹಾರ ನೀಡಿದೆ ಎಂದು ಹೇಳಿದರು.

ಜ.12ರವರೆಗೆ ಅಭಿಯಾನ: ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ ಜ.2ರಿಂದ 12 ರವರೆಗೆ ಬೂತ್ ವಿಜಯ ಅಭಿಯಾನ ನಡೆಯಲಿದೆ. ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ಬರಲಿದ್ದು, ಪಕ್ಷವನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಅಡಚಣೆಯಿಲ್ಲದೆ ನಡೆಯುತ್ತಿವೆ. ಸರ್ಕಾರದ ಯಾವುದೇ ಪರಿಹಾರ ಹಣ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ. ಕಳೆದ 60ವರ್ಷಗಳಲ್ಲಿ ಆಗದ ಅಭಿವೃದ್ಧಿ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದೆ ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪಕ್ಷದ ಜಿಲ್ಲಾ ವಕ್ತಾರ ಮಹೇಶ್ ಜೈನಿ, ವಿದ್ಯಾನಗರ ಬೂತ್ ಅಧ್ಯಕ್ಷ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!