ಕುಡಿದು ವಾಹನ ಚಲಾಯಿಸಿದರೆ ಠಾಣೆಯಲ್ಲಿ ಹೊಸ ವರ್ಷಾಚರಣೆ!

ಹೊಸದಿಗಂತ ವರದಿ,ಮಡಿಕೇರಿ:

ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ನಡೆಯಬಹುದಾದ ಅನಾಹುತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು, ರಾತ್ರಿ ವೇಳೆ‌ ಮದ್ಯಪಾನ‌ ಮಾಡಿ ವಾಹನ ಚಲಾಯಿಸಿದರೆ, ಬೀದಿ ಬದಿಯಲ್ಲಿ ಮದ್ಯಪಾನ ಮಾಡುವುದು ಕಂಡುಬಂದರೆ ಪೊಲೀಸ್ ಠಾಣೆಗಳಲ್ಲಿ ಹೊಸ ವರ್ಷ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಮಾಹಿತಿ ನೀಡಿದ್ದು, ಠಾಣೆಗಳಲ್ಲಿ ರಾತ್ರಿ ಹೊತ್ತು ಕೇವಲ ಒಬ್ಬ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರಲಿದ್ದು, ಉಳಿದಂತೆ‌ ಎಸ್.ಪಿ.ಸೇರಿದಂತೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಗಸ್ತು ಕರ್ತವ್ಯದಲ್ಲಿರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷವಾಗಿ ಪ್ರವಾಸಿಗರ ಸುರಕ್ಷತೆಗಾಗಿ ಕ್ರಮಕೈಗೊಳ್ಳಲಾಗಿದ್ದು, ಎಲ್ಲಿಯೂ ಜೀವಹಾನಿಗೆ ಅವಕಾಶ ಆಗಬಾರದೆಂಬ ಹಿನ್ನೆಲೆಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ರಾತ್ರಿ ವೇಳೆ ಪ್ರವಾಸಿ ತಾಣಗಳಿಗೂ ಜನರು ಹೋಗುವಂತಿಲ್ಲ. ಪಾರ್ಟಿ ಹೆಸರಿನಲ್ಲಿ ರಾತ್ರಿ ಹತ್ತು ಗಂಟೆಯ ನಂತರ ಡಿಜೆ ಸೌಂಡ್ಸ್ ಹಾಕುವ ಹಾಗಿಲ್ಲ. ಅಕ್ಕಪಕ್ಕದವರು ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ರೆಸಾರ್ಟ್, ಹೋಂ ಸ್ಟೇ ಮಾಲಕರಿಗೂ ಸೂಚನೆ ನೀಡಲಾಗಿದೆ ಎಂದು ಕೊಡಗು ಎಸ್‌ಪಿ ಹೇಳಿದ್ದಾರೆ.
ಜಿಲ್ಲೆಯ ಎಲ್ಲಾ ಹಾಸ್ಟೆಲ್‌ ಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಹಾಸ್ಟೆಲ್‌ ಮುಖ್ಯಸ್ಥರಿಗೂ ಮಾಹಿತಿ ನೀಡಲಾಗಿದೆ.
ಗಡಿಯಲ್ಲಿ ನಿಗಾ: ಕೊಡಗು- ಕೇರಳ ಗಡಿಭಾಗದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದ್ದು, ಡ್ರಗ್ಸ್ ಸಾಗಾಟ ಸಾಧ್ಯತೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ ರೇವ್ ಪಾರ್ಟಿ ಮಾಡಿದರೆ ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟವರ ಬಂಧನ ಮಾಡಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!