ಈ ರೋಡ್ ಶೋ ನೋಡಿದರೆ ಐದು ಲಕ್ಷ ಮತಗಳಿಂದ ಡಾ. ಮಂಜುನಾಥ್ ಗೆಲುವು ನಿಶ್ಚಿತ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್‌: 
 
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಚುನಾವಣಾ ಪ್ರಚಾರಕ್ಕೆ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಡಿಕೆ ಬ್ರದರ್ಸ್​ ಅವರ ಕೋಟೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ.

ಮೈತ್ರಿ ಅಭ್ಯರ್ಥಿ ಡಾ ಸಿಎನ್​ ಮಂಜುನಾಥ್​ ಪರವಾಗಿ ಇಂದು (ಏಪ್ರಿಲ್ 2) ಚನ್ನಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಈ ವೇಳೆ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅಮಿತ್ ಶಾ, ನಾನು ಕರ್ನಾಟಕದ ಜನರಿಗೆ ಮನವಿ ಮಾಡಲು ಬಂದಿದ್ದೇನೆ. ಕರ್ನಾಟಕದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಖಾತೆಗೆ ನೀಡಿ. ತೆನೆ ಹೊತ್ತ ಮಹಿಳೆ ಹಾಗೂ ಕಮಲಕ್ಕೆ ವೋಟ್ ನೀಡಿದರೆ ನೀವು ಮೋದಿಗೆ ಶಕ್ತಿ ‌ನೀಡಿದಂತೆ. ಈ ಬಾರಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ ಇದೆ ಎಂದರು.

ಇಂದಿನ ರೋಡ್ ಶೋ ನೋಡಿದರೆ ನಮ್ಮ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಐದು ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನನಗೆ ಮೂಡಿದೆ. ಹೀಗಾಗಿ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಲು ಬಂದಿದ್ದೇನೆ. ನೀವು ಹಾಕುವ ಮತ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ಮೋದಿ ಪ್ರಧಾನಿ ಆದ ಮೇಲೆ ಆರ್ಥಿಕತೆಯಲ್ಲಿ ಭಾರತ 11 ರಿಂದ 5ನೇ ಸ್ಥಾನಕ್ಕೆ ಬಂದಿದೆ. ಅದೇ ರೀತಿಯಾಗಿ ಈಗಲೂ ಅವರನ್ನು ಗೆಲ್ಲಿಸಿದರೆ‌ 3ನೇ‌ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗಿದ್ದಾರೆ. ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಹೀಗಾಗಿ ದೇಶದ ಜನರು ಮೋದಿ ಪರವಾಗಿ ಇದ್ದಾರೆ ಎಂದರು.

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿವೆ. ಆದರೆ, ಕಾಂಗ್ರೆಸ್‌ ಎಸ್‌ಡಿಪಿಐ ಅನ್ನು ಸಮರ್ಥನೆ ಮಾಡಿಕೊಂಡು ಬರುತ್ತಿದೆ. ಹಾಗಾದರೆ, ಜನ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬ ಪ್ರಶ್ನೆ ಬರುವುದಿಲ್ಲವೇ? ಆದರೆ, ದೇಶದಲ್ಲಿ ಈಗ ಆಡಳಿತ ನರೇಂದ್ರ ಮೋದಿ ಅವರ ಕೈಯಲ್ಲಿ ಇರುವುದರಿಂದ ಇಡೀ ದೇಶ ಸುರಕ್ಷಿತವಾಗಿದೆ. ರಾಜಕಾರಣದಲ್ಲಿ ನರೇಂದ್ರ ಮೋದಿಯವರು 23 ವರ್ಷಗಳಿಂದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಆಗಿನಿಂದ ಇಲ್ಲಿಯವರೆಗೂ ಅವರ ಮೇಲೆ ಒಂದೇ ಒಂದು ಗುರುತರ ಆಪಾದನೆ ಇಲ್ಲ. ಅದೇ ಇನ್ನೊಂದೆಡೆ ಪ್ರತಿಪಕ್ಷಗಳ ಮೇಲೆ 12‌ ಲಕ್ಷ ಕೋಟಿ ರೂಪಾಯಿಗೂ ಅಧಿಕ ಭ್ರಷ್ಟಾಚಾರದ ಆರೋಪಗಳಿವೆ ಎಂದು ಅಮಿತ್‌ ಶಾ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!