ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ ವಿವಾದ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಮತ್ತು ವಂಚನೆ ಎಸಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಪೊಲೀಸ್ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಇಡೀ ಪ್ರಕ್ರಿಯೆಯಲ್ಲಿ ಕ್ರಿಮಿನಲ್ ನಡವಳಿಕೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಅಧಿಕಾರಿಗಳ ಕಡೆಗಣನೆ
CEC ಜ್ಞಾನೇಶ್ ಕುಮಾರ್ ಮತ್ತು ಆಯೋಗದ ಐಟಿ ವಿಭಾಗದ ಅಧಿಕಾರಿ ಸೀಮಾ ಖನ್ನಾ ಅವರು ಇಸಿಐ ತಂತ್ರಾಂಶವನ್ನು ಅಕ್ರಮವಾಗಿ ಬಳಸಿದ್ದಾರೆ. ಮತದಾರರ ಪಟ್ಟಿಯ ಜವಾಬ್ದಾರಿ ಹೊತ್ತಿರುವ ಸ್ಥಳೀಯ ಬಿಎಲ್‌ಒ ಮತ್ತು ಇಆರ್‌ಒ ಅಧಿಕಾರಿಗಳನ್ನು ಬೈಪಾಸ್ ಮಾಡಿ, ಅವರಿಗೆ ಸಿಸ್ಟಮ್ ಪ್ರವೇಶ ಸಿಗದಂತೆ ಮಾಡಿ ಪಟ್ಟಿಯನ್ನು ತಿದ್ದಲಾಗಿದೆ. ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ನಲ್ಲಿ ಹೊಸ ಪ್ರಶ್ನೆಯನ್ನು ಅಕ್ರಮವಾಗಿ ಸೇರಿಸಲಾಗಿದೆ. ಈ ಗೊಂದಲದಿಂದಾಗಿ ದೇಶಾದ್ಯಂತ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. 18 ವರ್ಷ ತುಂಬುವ ಅವರ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಮತದಾನದ ಹಕ್ಕು ಸಿಗದಂತೆ ಮಾಡುವ ವ್ಯವಸ್ಥಿತ ಸಂಚು ಇದಾಗಿದೆ ಎಂದು ಆರೋಪಿಸಿದ್ದಾರೆ.
ಆಂತರಿಕ ಭಿನ್ನಾಭಿಪ್ರಾಯ ಬಹಿರಂಗ
ಮಾಧ್ಯಮ ತನಿಖಾ ವರದಿಯೊಂದನ್ನು ಉಲ್ಲೇಖಿಸಿದ ಮಹುವಾ, ಚುನಾವಣಾ ಆಯೋಗದ ಉಳಿದಿಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳ ವಿರುದ್ಧ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪ ಎತ್ತಿದ್ದರು ಎಂಬುದನ್ನು ನೆನಪಿಸಿದರು. ಜ್ಞಾನೇಶ್ ಕುಮಾರ್ ಉಳಿದಿಬ್ಬರು ಆಯುಕ್ತರ ಒಪ್ಪಿಗೆಯಿಲ್ಲದೆ ತಮಗಿಷ್ಟ ಬಂದಂತೆ ಕೆಲಸ ಮಾಡುತ್ತಿರುವ ಒಬ್ಬ ಹಠಮಾರಿ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಅವರಿಗೆ ಯಾವುದೇ ರಕ್ಷಣೆ ಸಿಗಬಾರದು, ಅವರ ವಿರುದ್ಧ ಕಾನೂನು ಕ್ರಮ ಜರುಗಲೇಬೇಕು ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
ರಾಜಕೀಯ ವಲಯದಲ್ಲಿ ತಲ್ಲಣ
ಈ ಬೆಳವಣಿಗೆ ಬೆನ್ನಲ್ಲೇ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಇದು ದೇಶದ ಜನರ ವಿರುದ್ಧ ನಡೆದ ‘ವೋಟ್ ಚೋರಿ’ ಮತ್ತು ಸಂವಿಧಾನದ ಮೇಲಿನ ನೇರ ದಾಳಿ. ಇದಕ್ಕೆ ಕಾರಣರಾದ ಬಿಜೆಪಿ, ಮತ್ತು ಚುನಾವಣಾ ಆಯೋಗ ದೇಶದ್ರೋಹದ ಕೆಲಸ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಬಿಜೆಪಿ ಮತ್ತು ಇಸಿಐ ಸೇರಿ ಚುನಾವಣೆಗಳನ್ನು ಲೂಟಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಆಯೋಗ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳು ನಡೆಯುವುದು ಸಹಜ ಎಂದು ಇಸಿಐ ಪರ ಬ್ಯಾಟ್ ಬೀಸಿದ್ದಾರೆ. ಆಯೋಗವು ಸಹ ತನ್ನ ಎಲ್ಲಾ ಆದೇಶಗಳು ಕಾನೂನುಬದ್ಧವಾಗಿಯೇ ಇವೆ ಎಂದು ಸ್ಪಷ್ಟನೆ ನೀಡಿದೆ.



