ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ ತನ್ನ ಸಾಂಸ್ಥಿಕ ರಂಗವನ್ನು ಬಲಪಡಿಸಲು ದೆಹಲಿ ಮಟ್ಟದಲ್ಲಿ ಮಹತ್ವದ ತಂತ್ರ ರೂಪಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಜಂಟಿ ಪ್ರಧಾನ ಕಾರ್ಯದರ್ಶಿಗಳನ್ನು ವಿವಿಧ ರಾಜ್ಯಗಳ ಪಕ್ಷದ ಘಟಕಗಳ ಉಸ್ತುವಾರಿಗಳಾಗಿ ನೇಮಕ ಮಾಡಿ ಅದೇಶ ಹೊರಡಿಸಿದ್ದಾರೆ.
ಪಕ್ಷವು ವಿವಿಧ ರಾಜ್ಯಗಳ ರಾಜ್ಯ ಉಸ್ತುವಾರಿಗಳನ್ನು ಘೋಷಿಸಿದ ಬೆನ್ನಲ್ಲೇ ಈ ಸಾಂಸ್ಥಿಕ ಬದಲಾವಣೆಯ ಪ್ರಕಟಣೆ ಹೊರಬಿದ್ದಿದೆ. ಈ ನೇಮಕಾತಿಗಳಲ್ಲಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂಘಟಕರು ಒಳಗೊಂಡಿದ್ದು, ಇವೆಲ್ಲವೂ ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹೈಕಮಾಂಡ್ ತಿಳಿಸಿದೆ.
ಸ್ಮೃತಿ ಇರಾನಿಗೆ ಡಬಲ್ ಜವಾಬ್ದಾರಿ
ಇತ್ತೀಚಿನ ಈ ಮಹತ್ವದ ಬದಲಾವಣೆಯ ಭಾಗವಾಗಿ ಪಕ್ಷದ ಹಿರಿಯ ನಾಯಕಿ ಸ್ಮೃತಿ ಇರಾನಿ ಅವರಿಗೆ ಛತ್ತೀಸ್‌ಗಢ ಮತ್ತು ಹರಿಯಾಣದ ಉಸ್ತುವಾರಿಯನ್ನು ನೀಡಲಾಗಿದೆ. ಹೊಸ ಜವಾಬ್ದಾರಿ ಹೊತ್ತವರ ಪಟ್ಟಿಯಲ್ಲಿ ಸತೀಶ್ ಧೋಂಡ್, ವಿ. ಸತೀಶ್, ಮಾನಸ್ ಮೊಹಾಂತಿ ಮತ್ತು ಮಂತ್ರಿ ಶ್ರೀನಿವಾಸುಲು ಸೇರಿದಂತೆ ಪ್ರಮುಖ ಸಂಘಟಕರು ಸೇರಿದ್ದಾರೆ.
ಕರ್ನಾಟಕದ ಮೂವರು ನಾಯಕರಿಗೆ ದೊಡ್ಡ ಜವಾಬ್ದಾರಿ
ಬಿಜೆಪಿ ಹೈಕಮಾಂಡ್ ಕರ್ನಾಟಕದ ಇಬ್ಬರು ನಾಯಕರು ಹಾಗೂ ಒಬ್ಬರು ಶಾಸಕರಿಗೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಅರುಣ್ ಬಿನ್ನಾಡಿ ಅವರನ್ನು ಪ್ರಭಾವಿ ಗುಜರಾತ್ ರಾಜ್ಯದ ಸಂಘಟನೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನಾಯಕರಾದ ದಶರಥ್ ಅವರಿಗೆ ತೆಲಂಗಾಣದ ಸಂಘಟನೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಬೆಳಗಾವಿಯ ಶಾಸಕಅಭಯ್ ಪಾಟೀಲ್ ಅವರನ್ನು ತೆಲಂಗಾಣದ ಬಿಜೆಪಿ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶಿಸಿದೆ.
ಇದನ್ನೂ ಓದಿ:
ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ
ಮತ್ತೊಂದೆಡೆ, ತೆಲಂಗಾಣದ ಸಹ ಉಸ್ತುವಾರಿಯಾಗಿ ನೇಮಕಗೊಂಡಿರುವ ಶಾಸಕ ಅಭಯ್ ಪಾಟೀಲ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ ಹರಿಪ್ರಸಾದ್, ʼಶಾಸಕ ಅಭಯ್ ಪಾಟೀಲ್ ಅವರು ಕಾನೂನು ಮೀರಿ ಬೆಳಗಾವಿಯಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಪತ್ರದ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಮಾಡಲು ಇವರು ಯಾರು? ಶಾಸಕರು ನೀಡಿರುವ ಈ ಅಕ್ರಮ ಪತ್ರದ ದಾಖಲೆಗಳು ನಮ್ಮ ಬಳಿ ಇವೆʼ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ನಿಯಮಬಾಹಿರ ಕ್ರಮದ ವಿರುದ್ಧ ಚುನಾವಣಾ ಆಯೋಗಕ್ಕೆ ಅಧಿಕೃತ ದೂರು ನೀಡುವುದಾಗಿ ಕಾಂಗ್ರೆಸ್ ಎಚ್ಚರಿಸಿದೆ.



