ಹೊಸದಿಗಂತ ವರದಿ,ತುಮಕೂರು:
ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಮಧುಚಂದ್ರ, ಶಿವಕುಮಾರ್, ಮಂಜುನಾಥ, ತಿಮ್ಮರಾಜ, ರವೀಶ್, ಇಮ್ರಾನ್ ಪಾಷ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆಗಸ್ಟ್ 12ರಂದು ಗುಬ್ಬಿ ತಾಲೂಕಿನ ತಿಪೂರು ಗ್ರಾಮದ ಆರೋಪಿ ಮಧುಚಂದ್ರ ಎಂಬಾತ ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ನಾಡಬಂದೂಕಿನೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದನು.
ಇದನ್ನು ಆಕ್ಷೇಪಿಸಿದ ದರ್ಶನ್ ಎಂಬುವರ ಜೊತೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದೂಕು ಕೆಳಗೆ ಬಿದ್ದು ಸ್ಥಳದಲ್ಲಿಯೇ ಇದ್ದ ಚೈತ್ರ ಎಂಬುವರಿಗೆ ಗಾಯವಾಗಿತ್ತು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಆರೋಪಿ ಹೊಂದಿದ್ದ ಲೈಸೆನ್ಸ್ ಇಲ್ಲದ ಬಂದೂಕಿನ ಬಗ್ಗೆ ತನಿಖೆ ನಡೆಸಿದಾಗ ಜಿಲ್ಲೆಯಲ್ಲಿ ನಾಡ ಬಂದೂಕುಗಳನ್ನು ತಯಾರಿಸಿ 25,000 ರಿಂದ 30,000 ರೂ ಗಳಿಗೆ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.
ಬಂಧಿತರಾಗಿರೋ ಆರು ಮಂದಿ ಆರೋಪಿಗಳಿಂದ ಒಟ್ಟು ನಾಲ್ಕು ಬಂದೂಕುಗಳನ್ನು ಬಂದೂಕು, ಬಿಡಿ ಭಾಗಗಳನ್ನು ಹಾಗೂ ಇದಕ್ಕೆ ತಯಾರಿಸಲು ಬಳಸಲಾಗಿದ್ದ ಕಚ್ಚಾ ಸಾಮಗ್ರಿಗಳನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ರೀತಿ ನಾಡ ಬಂದೂಕು ಗಳನ್ನು ಖರೀದಿ ಮಾಡಿರುವವರು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಇದಲ್ಲದೆ ಅನೇಕ ಮಂದಿ ಬಳಿ ಅಕ್ರಮವಾಗಿ ನಾಡ ಬಂದೂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅದನ್ನು ವಶಕ್ಕೆ ತೆಗೆದುಕೊಳ್ಳುವಂತಹ ಕಾರ್ಯದಲ್ಲಿ ಪೊಲೀಸರು ಮುಂದಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ.