ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು (Cavery Water) ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ (Supreme Court) ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲುಎಂಎದಲ್ಲಿ ಪ್ರತಿಭಟಿಸದೇ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ರಾಜ್ಯದ ರೈತರಿಗೆ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಡ್ಯಾಂನಲ್ಲಿ ಸ್ಟೋರೇಜ್ ಮಾಡಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿ ನೀವು ತಂದೊಡ್ಡಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಡಿಸಿಎಂ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿರುವುದು. ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.