October 10, 2026
Saturday, October 10, 2026
spot_img

ದೈವ ಅನುಕರಣೆ ಪ್ರಕರಣ: ಮತ್ತೊಮ್ಮೆ ಕ್ಷಮಾಪಣೆ ಕೇಳೋದಕ್ಕೆ ರಣವೀರ್ ಸಿಂಗ್ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾವುಂಡಿ ದೈವವನ್ನು ಅನುಕರಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಏಪ್ರಿಲ್ 10ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದ್ದು, ಅವರ ಪರ ವಕೀಲರು ಮಹತ್ವದ ಹೊಸ ಹೇಳಿಕೆಯನ್ನು ಸಲ್ಲಿಸಿದ್ದಾರೆ.

ಹಿಂದಿನ ಕ್ಷಮಾಪಣೆಯ ಬಗ್ಗೆ ಉದ್ಭವಿಸಿದ್ದ ಅನುಮಾನಗಳನ್ನು ನಿವಾರಿಸಲು ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್ ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ರಣವೀರ್ ಪರ ವಕೀಲ ಸಜನ್ ಪೂವಯ್ಯ ಅವರು, ಈ ಬಾರಿ ಸಲ್ಲಿಸಲಾಗುವ ಅಫಿಡವಿಟ್‌ನಲ್ಲಿ ಸ್ಪಷ್ಟ ಮತ್ತು ಪ್ರಾಮಾಣಿಕ ಕ್ಷಮೆಯಾಚನೆ ಇರಲಿದೆ. ಜೊತೆಗೆ ಚಾವುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದಾಗಿ ಕೂಡ ಅವರು ಉಲ್ಲೇಖಿಸಲಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಇದನ್ನೂ ಓದಿ:

ಇದಕ್ಕೂ ಮೊದಲು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ದೈವಾರಾಧಕರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂಬ ಅರಿವು ತನ್ನಿಗೆ ಇರಲಿಲ್ಲ ಎಂದು ರಣವೀರ್ ಸ್ಪಷ್ಟಪಡಿಸಿದ್ದರು. ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದ ಕಾರಣ ಸ್ಥಳೀಯ ದೈವ ಆರಾಧನೆಯ ಸೂಕ್ಷ್ಮತೆಗಳ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ ಎಂದು ಅವರು ಹೇಳಿದ್ದರು.

ಆದರೆ ದೂರುದಾರ ಪ್ರಶಾಂತ್ ಮೇಥಲ್ ಅವರು ಆ ಕ್ಷಮಾಪಣೆಯಲ್ಲಿ ಪ್ರಾಮಾಣಿಕತೆ ಕಾಣಿಸಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೂವಯ್ಯ, ದೂರುದಾರರೊಂದಿಗೆ ಚರ್ಚಿಸಿ ಹೊಸ ಅಫಿಡವಿಟ್ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ನಡೆದ ಚಿತ್ರೋತ್ಸವದ ವೇಳೆ ರಣವೀರ್ ದೈವದ ಅನುಕರಣೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಏಪ್ರಿಲ್ 23ಕ್ಕೆ ಮುಂದೂಡಿದೆ.

Must Read