August 10, 2026
Monday, August 10, 2026
spot_img

ಮಹತ್ವದ ತೀರ್ಪು: ದಲಿತ ಮುಖಂಡನ ಕೊ*ಲೆ ಪ್ರಕರಣದ 17 ಹಂತಕರಿಗೆ ಜೀವಾವಧಿ ಶಿಕ್ಷೆ

ಹೊಸದಿಗಂತ ವರದಿ ಯಾದಗಿರಿ:

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಕನ್ಯಾಕೋಳೂರು ಗ್ರಾಮದಲ್ಲಿ 2014ರಲ್ಲಿ ನಡೆದ ದಲಿತ ಮುಖಂಡ ದೇವೇಂದ್ರಪ್ಪ ಭೀಮಪ್ಪ ದಳಪತಿ ಹತ್ಯೆ ಪ್ರಕರಣದಲ್ಲಿ 12 ವರ್ಷಗಳ ಬಳಿಕ ಇಲ್ಲಿನ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಪ್ರಧಾನ ಜಿಲ್ಲಾ ಮತ್ತು ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಾಸಿದ್ದಾರಾದ್ಯ ಎಚ್.ಜೆ.ಅವರು ಗುರುವಾರ  17 ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಒಬ್ಬ ಆರೋಪಿಗೆ 7 ವರ್ಷಗಳ ಸಜೆ ಹಾಗೂ ಇಬ್ಬರು ಆರೋಪಿಗಳಿಗೆ ತಲಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಎಲ್ಲ ಆರೋಪಿಗಳಿಗೆ ಸೇರಿ ಒಟ್ಟು 4.25 ಲಕ್ಷ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದರು.

ಏನಿದು ಘಟನೆ? :  2014ರ ಜನವರಿಯಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆಯ ವೇಳೆ ಬ್ಯಾನರ್ ಹರಿದ ವಿಚಾರವಾಗಿ ಉಂಟಾದ ಜಾತಿ ಸಂಘರ್ಷವೇ ಬಳಿಕ ಹಿಂಸಾತ್ಮಕ ರೂಪ ಪಡೆದಿತ್ತು. ದೇವೇಂದ್ರಪ್ಪ ದಳಪತಿ ಅವರನ್ನು ಕೊಡಲಿ, ಬಡಿಗೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಒಟ್ಟು 32 ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. 68 ಸಾಕ್ಷಿದಾರರ ಪೈಕಿ 37 ಮಂದಿಯ ಸಾಕ್ಷ್ಯವನ್ನು ನ್ಯಾಯಾಲಯ ದಾಖಲಿಸಿಕೊಂಡು ಸುದೀರ್ಘ ವಿಚಾರಣೆ ನಡೆಸಿತು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಆರೋಪಿ ಸಂಖ್ಯೆ 1ರಿಂದ 17ರವರೆಗೆ ಜೀವಾವಧಿ ಶಿಕ್ಷೆ, ಆರೋಪಿ ಸಂಖ್ಯೆ 18ಕ್ಕೆ 7 ವರ್ಷಗಳ ಶಿಕ್ಷೆ ಹಾಗೂ ಆರೋಪಿ ಸಂಖ್ಯೆ 19 ಮತ್ತು 20ಕ್ಕೆ ತಲಾ 6 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಇದನ್ನೂ ಓದಿ:

ವಿಧಿಸಲಾದ 4.25 ಲಕ್ಷ ದಂಡದ ಮೊತ್ತವನ್ನು ಮೃತ ದೇವೇಂದ್ರಪ್ಪ ದಳಪತಿ ಅವರ ಕುಟುಂಬದವರಿಗೆ ನೀಡುವಂತೆ ಹಾಗೂ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನ್ಯಾಯಾಲಯ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !